

ಬಾಗಲಕೋಟೆ: ಬಸವರಾಜ್ ಬೊಮ್ಮಾಯಿ ಸಿಎಂ ಇದ್ದಾಗ ಅವರಿಗೆ ಪಂಚಮಸಾಲಿ ಸಮಾಜದ ಬಗ್ಗೆ ಗೌರವ ಮತ್ತು ಭಯ ಇತ್ತು. ಆದರೆ, ಇವರಿಗೆ(ಸಿದ್ದರಾಮಯ್ಯ) ಗೌರವ, ಭಯ ಏನೂ ಇಲ್ಲ. ಬದಲಿಗೆ ಇವರನ್ನು ಕಂಡರೆ ನಾವು ಭಯ ಪಡುವಂತಂತಾಗಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸುತ್ತಿಲ್ಲ ಎಂದು ತಮ್ಮ ಅಸಮದಾನ ಹೊರಹಾಕಿದರು.
ಹಿಂದೆ ಬಸವರಾಜ್ ಬೊಮ್ಮಾಯಿ ಸಿಎಂ ಇದ್ದಾಗ ಆವತ್ತಿನ ಪರಿಸ್ಥಿತಿ ಬೇರೆ ಇತ್ತು. ಹೀಗಾಗಿ ನಾವು ಬೊಮ್ಮಾಯಿ ಅವರನ್ನು ಎಲ್ಲಿಗೆ ಕರೆದರು ಬಂದು ಮಾತನಾಡುತ್ತಿದ್ದರು. ಈಗ ನಾನು ಸಿಎಂ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬಂದಿದೆ. ಅದು ಅನಿವಾರ್ಯ, ಏನೂ ಮಾಡೋಕೆ ಬರುವುದಿಲ್ಲ. ನಾವು ಹೋರಾಟದಲ್ಲಿ ಇರುವುದರಿಂದ ಎಷ್ಟೇ ಕಷ್ಟ ಆದರೂ ಹೋರಾಟ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾರೂ ಕೂಡ ಖಾಯಂ ಸಿಎಂ ಆಗಿ ಇರುವುದಿಲ್ಲ. ಈಗಲ್ಲದಿದ್ದರೂ ಇನ್ನೂ ಐದು, ಹತ್ತು ವರ್ಷಕ್ಕಾದರೂ ರಾಜ್ಯಕ್ಕೆ ಒಬ್ಬ ಒಳ್ಳೆಯ ಮುಖ್ಯಮಂತ್ರಿಗಳನ್ನು ದೇವರು ಕೊಟ್ಟೆ ಕೊಡುತ್ತಾನೆ. ಆಗ ನಮ್ಮ ಮೀಸಲಾತಿಗೆ ಸ್ಪಂದಿಸುವ ಸಿಎಂ ಬರುತ್ತಾರೆ. ಹಾಗೆಂದು ಈಗ ನಿರಾಸೆಯಾಗಿ ಕುಳಿತರೆ ಹೋರಾಟ ನಿಂತು ಬಿಡುತ್ತದೆ. ಅವರು ಸ್ಪಂದನೆ ಮಾಡಲಿ, ಬಿಡಿಲಿ ನಮ್ಮ ಹಕ್ಕೋತ್ತಾಯವನ್ನು ಮಾಡುತ್ತೇವೆ. ನಮ್ಮ ಸಮಾಜದ ಶಾಸಕರ ಮೂಲಕವೂ ಒತ್ತಡ ಹಾಕುತ್ತೇನೆ. ವಕೀಲರ ಮೂಲಕವೂ ಒತ್ತಡ ಹಾಕುತ್ತೇನೆ. ಸ್ವತಃ ವಕೀಲರು ಆಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಕೀಲರನ್ನು ನೋಡಿಯಾದರೂ ಮನಸ್ಸು ಕರಗಿ ನಮಗೆ ಮೀಸಲಾತಿ ಘೋಷಣೆ ಮಾಡಬಹುದು ಎಂದು ಸ್ವಾಮೀಜಿ ಹೇಳಿದರು.
ಪಂಚಮಸಾಲಿಗಳಿಗೆ ೨ಎ ಮೀಸಲಾತಿ ಹೋರಾಟ ಆರಂಬಿಸಿದ ಬಳಿಕ ಇದೀಗ ಇಬ್ಬರು ಸಿಎಂಗಳು ಹೋಗಿ ಮೂರನೇಯವರು ಬಂದಿದ್ದಾರೆ. ಮುಖ್ಯಮಂತ್ರಿಗಳು ಯಾರೇ ಆಗಿರಲಿ ಮೀಸಲಾತಿ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ. ಕಾನೂನಿನ ತೊಡಕಿನ ಕಾರಣಕ್ಕೆ ಪಂಚಮಸಾಲಿಗಳಿಗೆ ೨ಎ ಮೀಸಲಾತಿ ನೀಡುವುದು ವಿಳಂಬವಾದರೆ ಎಲ್ಲ ಲಿಂಗಾಯತರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಶಿಪಾರಸು ಮಾಡಬೇಕು ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದರು.