ಸಿಂಧೋಳ್ ಬುಡಕಟ್ಟು ಸಮುದಾಯದಲ್ಲಿ ಕಲೆ ರಕ್ತಗತ

07-kkr-1(5-25
Published on

ಕಿಕ್ಕೇರಿ: ಸಿಂಧೋಳ್ ಬುಡಕಟ್ಟು ಸಮುದಾಯ ಎಂದರೆ ರಕ್ತಗತವಾಗಿ ಕಲೆ ಅರಗಿಸಿಕೊಂಡಿರುವವರು ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಬಣ್ಣಿಸಿದರು.

ಹೋಬಳಿಯ ಕೃಷ್ಣಾಪುರ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಕಲಾವಿದರೊಂದಿಗೆ ಮಾತನಾಡುತ್ತ, ಕೆಳಸ್ತರ ಸಮುದಾಯದವರಾದ ತಮ್ಮಲ್ಲಿ ಹುದುಗಿರುವ ಪ್ರತಿಭೆ ದೇಶಕ್ಕೆ ಹಂಚಬಹುದು. ಸರ್ಕಾರ ಸಾಕಷ್ಟು ಸೌಲಭ್ಯ, ಸವಲತ್ತು ವಿಶೇಷವಾಗಿ ನೀಡುತ್ತಿದೆ. ಅನಕ್ಷರತೆ, ಮಾಹಿತಿ ಕೊರತೆಯಿಂದ ಉಳ್ಳವರ ಪಾಲಾಗುತ್ತಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಿ. ಜಾತಿ ಪ್ರಮಾಣ ಪತ್ರವನ್ನು ಸರಿಯಾಗಿ ಮಾಡಿಸಿಕೊಳ್ಳಿ ಎಂದರು.

ಬೆಡಗು, ಭಿನ್ನಾಣ, ಆಚಾರ, ಆಹಾರ ಪದ್ಧತಿ, ಕುಲಶಾಸ್ತ್ರದ ಮೂಲಕ ತಮ್ಮ ಸಮುದಾಯ ಗುರ್ತಿಸಲ್ಪಟ್ಟಿದೆ. ಊರು ಮಾರಮ್ಮ ಇಟ್ಟುಕೊಂಡು ಬದುಕಿಗಾಗಿ ಊರೂರು ಅಲೆಯದಿರಿ. ಮಕ್ಕಳಿಗೆ ಶಿಕ್ಷಣ ಕೊಡಿಸಿ. ಒಳಮೀಸಲಾತಿ ಜಾತಿಗಣತಿ ಸರ್ವೇ ನಡೆಯುತ್ತಿದೆ. ತಮ್ಮ ಜಾತಿ ಕಾಲಂನಲ್ಲಿ ಮರೆಯದೆ ಸಿಂಧೋಳ್ ಎಂದು ಬರೆಯಿಸಿ. ಸಾಕಷ್ಟು ಗ್ರಾಮಸ್ಥರಿಗೆ ಬೇಡ ಜನಾಂಗ ಜಾತಿ ಪ್ರಮಾಣ ಪತ್ರವಿರುವುದನ್ನು ಮೊದಲು ಸರಿಪಡಿಸಿಕೊಳ್ಳಿ. ಮಕ್ಕಳ ಶಿಕ್ಷಣ, ಉದ್ಯೋಗಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಸಿಂಧೋಳ್ ವರ್ಗ ಇರುವ ಗ್ರಾಮ ತಮ್ಮದು. ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು, ಹಳೆಯ ಸಂಪ್ರದಾಯ, ಕುಲ ಕಸುಬು ಬಿಡಿ. ಸರ್ಕಾರ ನೀಡುವ ಸವಲತ್ತು ಬಳಸಿಕೊಳ್ಳಿ. ಗುಡಿ, ಗೃಹ ಕೈಗಾರಿಕೆಗೆ ಮುಂದಾಗಿ ಸ್ವಾವಲಂಭಿಗಳಾಗಿ. ನಾಟಕ ಕಲಿಸುವ, ಡೋಲು, ತಮಟೆ ನುಡಿಸುವ ಕಲಾವಿದರು ಗ್ರಾಮದಲ್ಲಿ ಸಾಕಷ್ಟಿದ್ದೀರಿ. ಕಲಾವಿದರಿಗೆ ಸವಲತ್ತು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಸಮಾಜದ ಮುಖಂಡ ಮಾರಪ್ಪ ಮಾತನಾಡಿ, ನಮ್ಮೂರಿನ ಕಲಾವಿದರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದವರು ಎಂಬುದು ಖುಷಿಯಾಗಿದೆ. ತಮ್ಮ ಸಲಹೆ ಬಹು ಉಪಯೋಗವಾಗಿದೆ. ಕಲಾವಿದರಿಗೆ ಮಾಸಾಶನ, ಸಂಗೀತ ಶಿಬಿರ ಸೌಲಭ್ಯ ಕಲ್ಪಿಸಿಕೊಡಿ ಎಂದು ವಿನಂತಿಸಿದರು.

ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಎಲೆಗಳು ನೂರಾರು, ನಾವು ಭಾರತೀಯರು ಮತ್ತಿತರ ಗೀತೆಗಳನ್ನು ಹಾಡಿ ಇಡೀ ಸಿಂಧೋಳ್ ಬುಡಕಟ್ಟು ಜನಾಂಗದವರನ್ನು ಖುಷಿಪಡಿಸಿದರು.

ಮುಖಂಡರಾದ ಮಾರಪ್ಪ, ಅಂಜನಪ್ಪ, ರಾಜಣ್ಣ, ನರಸಿಂಹ, ಸಿದ್ದಲಿಂಗಯ್ಯ, ರಾಮಯ್ಯ, ರಂಗಯ್ಯ, ಗಂಗಮ್ಮ, ಶಂಕರ್, ಶಾಂತಕುಮಾರ್, ಲಕ್ಷ್ಮಯ್ಯ, ಶಿವಣ್ಣ, ರಾಜೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net