

ಬಾಗಲಕೋಟೆ: ಆಧುನಿಕ ಕಾಲಘಟ್ಟದಲ್ಲಿರುವ ಸಮುದಾಯಗಳು ವೈಜ್ಞಾನಿಕ, ಶೈಕ್ಷಣಿಕ, ವೈಚಾರಿಕವಾಗಿ ಪ್ರಜ್ಞೆಯಿಂದ ಕೂಡಿವೆ. ಇಂದಿನ ಒತ್ತಡದ ಬದುಕಿನ ನಿರ್ವಹಣೆಯಲ್ಲಿ ಸಾಹಿತ್ಯ ಅಧ್ಯಯನದ ಓದು ಮುಖ್ಯ. ಸಾಹಿತ್ಯದಿಂದ ಸಮುದಾಯದ ಬದುಕು ಸುಂದರವಾಗುತ್ತದೆ ಎಂದು ನಾಡೋಜ ಡಾ.ಗೊ.ರು.ಚನ್ನಬಸಪ್ಪನವರು ಹೇಳಿದರು.
ಇಲ್ಲಿನ ನವನಗರದ ಕಸಾಪ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನಾಡೋಜ ಡಾ.ಗೊ.ರು.ಚನ್ನಬಸಪ್ಪರವರಿಗೆ ಅಭಿನಂದನಾ ಸಮಾರಂಭ ಮತ್ತು ಸಾಹಿತಿ ಆರ್.ಸಿ.ಚಿತ್ತವಾಡಗಿ ಅವರ ನೆಲಬಣ್ಣದ ಹಕ್ಕಿ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಯಾವುದೇ ಭೌತಿಕ ಸಂಪತ್ತು ಗಳಿಸಿಲ್ಲ. ಆದರೆ ಜನರ ಪ್ರೀತಿ, ವಿಶ್ವಾಸ ಮತ್ತು ಜನಸಂಪತ್ತು ಸಾಕಷ್ಟು ದೊರತಿದೆ. ನನಗೆ ನಾಡಿನ ಸೇವೆಗಾಗಿ ಲಭಿಸಿದ ಅವಕಾಶಗಳು ಅದು ಕನ್ನಡಿಗರ ಪ್ರೀತಿಯ ಕೈಗನ್ನಡಿಯಾಗಿದೆ ಎಂದರು.
ಮಾಜಿ ಶಾಸಕ, ಸಾಹಿತಿ ಎಸ್.ಜಿ.ನಂಜಯ್ಯನಮಠ ಮಾತನಾಡಿ, ನಾಡೋಜ ಗೊ.ರು.ಚ ಕನ್ನಡ ನಾಡಿನ ಆಸ್ತಿ ಮತ್ತು ಅಸ್ಮೀತೆಯಾಗಿದ್ದಾರೆ. ಅವರನ್ನು ಗೌರವಿಸುವ ಸುವರ್ಣಾವಕಾಶವು ದೊರತಿರುವುದು ಜಿಲ್ಲೆಯ ಕನ್ನಡಿಗರ ಭಾಗ್ಯವಾಗಿದೆ ಎಂದು ತಿಳಿಸಿದರು.
ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜಿ.ಜಿ.ಹಿರೇಮಠ ಮಾತನಾಡಿ, ಶರಣ ಸಾಹಿತಿಗಳಾದ ಡಾ.ಗೊ.ರು.ಚನ್ನಬಸಪ್ಪ ಅವರು ನಾಡಿನ ಸೇವೆ ಮಾಡುತ್ತಾ ಕನ್ನಡದ ಅಮೃತ ನಿಧಿ ಯೋಜನೆಯಡಿ ಒಬ್ಬ ಕನ್ನಡಿಗ ಒಂದು ರೂ. ಎಂಬ ಘೋಷ ವಾಕ್ಯದ ಮೂಲಕ ದೇಣಿಗೆ ಸಂಗ್ರಹಿಸಿ, ಕನ್ನಡ ಸಾಹಿತ್ಯ ಪರಿಷತ್ತನ್ನು ಆರ್ಥಿಕವಾಗಿ ಸದೃಢಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕನ್ನಡ ನೆಲಕ್ಕೆ ಹೊನ್ನು ಬಿತ್ತಿದ ಕನ್ನಡದ ಕಟ್ಟಾಳು ಆಗಿದ್ದಾರೆ ಎಂದು ಬಣ್ಣಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಮೂಲಕ ರಾಜ್ಯದ ಜನಪದ ಕಲೆಗಳ ಸಂರಕ್ಷಣೆ, ಪ್ರದರ್ಶನ, ದಾಖಲೀಕರಣ, ಪ್ರಸಾರವಾಗುವಂತ ಮಹತ್ವದ ಕಾರ್ಯಗಳನ್ನು ನಾಡೋಜ ಡಾ.ಗೊ.ರು.ಚ ಅವರು ಮಾಡಿದ್ದಾರೆ ಎಂದು ಹೇಳಿದರು.
ಸಾಹಿತಿ ಡಾ.ಸಿ.ಎಂ.ಜೋಶಿ ನೆಲಬಣ್ಣದ ಹಕ್ಕಿ ಕೃತಿ ಕುರಿತು ಅರ್ಥ ಪೂರ್ಣವಾಗಿ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಮತ್ತು ಸಾಹಿತಿ ಆರ್.ಸಿ.ಚಿತ್ತವಾಡಗಿ ದಂಪತಿಗಳನ್ನು ಕಸಾಪ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅ.ಭಾ.ಶ.ಸಾ.ಪ ಜಿಲ್ಲಾಧ್ಯಕ್ಷ ಎ.ಎಸ್.ಪಾವಟೆ, ಜಿಲ್ಲಾ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ತಾತಸಾಹೇಬ ಬಾಂಗಿ, ಲೇಖಕರಾದ ಆರ್.ಸಿ.ಚಿತ್ತವಾಡಗಿ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ಕುತುಬುದ್ದಿನ್ ಖಾಜಿ, ಸಾಹಿತಿ ಮಲ್ಲಿಕಾರ್ಜುನ ಶೆಲ್ಲಿಕೇರಿ, ಮಹಾದೇವ ಕಂಬಾಗಿ, ಕಿರಣ ಬಾಳಗೊಳ, ಡಾ.ಸಣ್ಣವೀರಣ್ಣ ದೊಡ್ಡಮನಿ, ಡಾ.ಪಿ.ಎಂ.ಹುಗ್ಗಿ, ಡಾ.ಗೀತಾ ದಾನಶೆಟ್ಟಿ, ವಿಜಯಶ್ರೀ ಮುರನಾಳ, ಡಾ.ಸುಮಂಗಲಾ ಮೇಟಿ ಇತರರು ಇದ್ದರು. ಪವಿತ್ರಾ ಜಕ್ಕಪ್ಪನವರ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಡಾ.ಲೋಕಣ್ಣ ಭಜಂತ್ರಿ ಸ್ವಾಗತಿಸಿದರು.ಪ್ರೊ.ಸಂಗಮೇಶ ಬ್ಯಾಳಿ ವಂದಿಸಿದರು.