

ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದಲ್ಲಿ ಸಗಣಿ ಓಕುಳಿ ಹಬ್ಬ ಇತ್ತೀಚೆಗೆ ಸಡಗರದಿಂದ ನಡೆಯಿತು.
ಜಂಗಮ ಹಾಗೂ ಶಿವನಿಗೆ ಭಕ್ತಿಯ ವಿಷಯದಲ್ಲಿ ನಡೆದ ಹೋರಾಟದಲ್ಲಿ ನಡೆದ ಯುದ್ಧದಲ್ಲಿ ಶಿವನಿಗೆ ಸೋಲಾಗಿ ಜಂಗಮನಿಗೆ ಜಯವಾದ ಸಲುವಾಗಿ ಈ ಹಬ್ಬವನ್ನು ದೀಪಾವಳಿ ಹಬ್ಬದಲ್ಲಿ ಆಚರಿಸಲಾಯಿತು.
ಗ್ರಾಮದಲ್ಲಿನ ರಂಗಸ್ಥಳದಲ್ಲಿ ಯುವಕರ 2 ಗುಂಪು ಸಗಣಿ ಕಾಳಗಕ್ಕೆ ಹಿರಿಯರ ಮಾರ್ಗದರ್ಶನದಂತೆ ಸಗಣಿ ಶೇಖರಣೆಗೆ ಮುಂದಾದರು. ಜಂಗಮರಾಗಿ ಸಾಸಲು ಗ್ರಾಮದ ಹಾಲುಮತದ ಯುವಕರು, ಶಿವನ ಪರವಾಗಿ ಸಾಸಲು ಗ್ರಾಮದ ವೀರಶೈವ ಪಂಗಡದ ಯುವಕರು ಸಗಣಿ ಕಾಳಗದಲ್ಲಿ ಭಾಗವಹಿಸಿದ್ದರು.
ಆರಂಭದಲ್ಲಿ ಶಿವನ ಪರವಾಗಿ ಹಿರಿಯರು, ಯುವಕರು ಭಾಗವಹಿಸದೆ ಪುಟಾಣಿಗಳ ದಂಡು ಸಗಣಿ ಉಂಡೆ ಕಟ್ಟಲು ಸಜ್ಜಾಗಿದ್ದರು. ಎದುರಾಳಿ ಭಕ್ತರ ಗುಂಪಿನಲ್ಲಿ ಯುವಕರು ಭಾಗವಹಿಸಿದ ತರುವಾಯ ಶಿವನ ಪರವಾದ ಗುಂಪಿನಲ್ಲಿ ಮಕ್ಕಳ ಬದಲು ಯುವಕರು ದಂಡು ಸಜ್ಜಾಯಿತು.
ಆರಂಭದಿಂದಲೂ ಕೊನೆಯವರೆಗೂ ಮಳೆರಾಯ ಬಿಡದೆ ಕಾಡಿದ ಸಲುವಾಗಿ ಕಾಳಗಕ್ಕೆ ತುಸು ಕಷ್ಟವಾಯಿತು. ಎರಡು ಗುಂಪಿನ ಯುವಕರು ರಾಶಿ ರಾಶಿಯಾಗಿ ಬಿದ್ದಿದ್ದ ಸಗಣಿಯನ್ನು ಕಾಲಿನಿಂದ ತುಳಿದು ನುಣ್ಣಗೆ ಮಾಡಿಕೊಂಡರು. ಚಿಕ್ಕ ಉಂಡೆಯಾಗಿ ಕಟ್ಟಿಕೊಂಡು ಹೋರಾಟಕ್ಕೆ ಸಜ್ಜಾದರು. ಪರಸ್ಪರ ಸಗಣಿಯ ಉಂಡೆಯನ್ನು ಬಿರುಸಿನಿಂದ ಎದುರಾಳಿಗಳಿಗೆ ಬೀಸಿದರು. ಅಂತಿಮವಾಗಿ ಭಕ್ತ ಜಂಗಮರ ಗುಂಪಾದ ಸಾಸಲುಕೊಪ್ಪಲು ಗುಂಪಿನ ಯುವಕರು ವಿಜೇತರಾದರು.
ಎರಡು ಗುಂಪಿನವರು ಪವಿತ್ರ ಪುಷ್ಕರಿಣಿಯಲ್ಲಿ ಮಿಂದು ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜಿಸಿದರು.
ಸಗಣಿ ಹಬ್ಬವನ್ನು ಸವಿಯಲು ಹೋಬಳಿಯಲ್ಲದೆ ಜಿಲ್ಲೆಯ ವಿವಿಧೆಡೆಯಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು.