ಸಾವಿರಾರು ಭಕ್ತರಿಂದ ಪಿತೃಕಾರ್ಯ

23gkn1-a3-
Published on

ವಿಜಯವಾಣಿ ಸುದ್ದಿಜಾಲ ಗೋಕರ್ಣ: ಮಹಾಶಿವರಾತ್ರಿ ಮಾಘ ಅಮಾವಾಸ್ಯೆ ಭಾನುವಾರ ಕ್ಷೇತ್ರ ಪದ್ಧತಿಯಂತೆ ಸಾವಿರಾರು ಯಾತ್ರಿಕರು ಮತ್ತು ಜಿಲ್ಲೆಯ ನಾನಾ ಕಡೆಗಳಿಂದ ಬಂದ ಆಸ್ತಿಕರು ಪಿತೃಗಳ ಸಂತೃಪ್ತಿಗಾಗಿ ವಿವಿಧ ಕಾರ್ಯ ನಡೆಸಿದರು. ಸಮುದ್ರ ತೀರದಲ್ಲಿ ಸಾಲಾಗಿ ಕುಳಿತ ಬಡವರಿಗೆ ದವಸ ಧಾನ್ಯ ವಿತರಿಸಲಾಯಿತು. ಇದೇ ಮೊದಲ ಬಾರಿಗೆ ಸಮುದ್ರ ತೀರದಲ್ಲಿ ದವಸ ಪಡೆಯುವ ಬಡವರಿಗಾಗಿ ಪೆಂಡಾಲ್ ಹಾಕಿ ತಂಪಿನ ವ್ಯವಸ್ಥೆ ಮಾಡಿರುವುದು ಮೆಚ್ಚುಗೆ ಗಳಿಸಿತು. ಇದಕ್ಕೂ ಮುನ್ನ ಸಮುದ್ರ ಸ್ನಾನ ಮಾಡಿದ ಜನ ನಂತರ ತಮ್ಮ ತಮ್ಮ ಪಿತೃಗಳಿಗೆ ಪುರೋಹಿತರ ನೇತೃತ್ವದಲ್ಲಿ ಪಿಂಡಪ್ರದಾನ ಮಾಡಿ ಅವುಗಳನ್ನು ಸಮುದ್ರಕ್ಕೆ ವಿಸರ್ಜಿಸಿದರು. ಮಾಸಗಳಲ್ಲಿ ಮಾಘ ಮಾಸಕ್ಕೆ ವಿಶೇಷ ಪಾವಿತ್ರ್ಯ ಕೊಡಲಾಗಿದ್ದು ಮಾಘ ಅಮಾವಾಸ್ಯೆಯಂದು ನೆರವೇರಿಸುವ ಈ ಎರಡು ಪಿತೃಕಾರ್ಯಗಳಿಂದ ಪಿತೃಗಳು ಸಂಪ್ರೀತರಾಗುತ್ತಾರೆ ಎಂಬ ನಂಬುಗೆಯಿದೆ. ಹೀಗಾಗಿ ಬೆಳಗ್ಗೆ ಸಮುದ್ರ ತೀರದ ಉದ್ದಕ್ಕೂ ಜನ ಜಂಗುಳಿ ಕಂಡುಬಂದಿತು.

ಮಹಾರಥೋತ್ಸವ: ಮಹಾಶಿವರಾತ್ರಿ ಉತ್ಸವದ ಪ್ರಮುಖ ಅಂಗವಾದ ಮಹಾಬಲೇಶ್ವರ ಮಹಾರಥೋತ್ಸವ ಫೆ.24ರಂದು ಮಧ್ಯಾಹ್ನ 2.30ರಿಂದ ನಡೆಯಲಿದೆ. ಫೆ.25ರಂದು ಜರುಗುವ ಓಕಳಿ ಕಾರ್ಯಕ್ರಮದೊಂದಿಗೆ ಒಂಬತ್ತು ದಿನದ ಮಹಾಶಿವರಾತ್ರಿ ಸಂಪನ್ನವಾಗುವುದು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net