

ರಟ್ಟಿಹಳ್ಳಿ: ಮರಣ ಹೊಂದಿದ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ ಮೂರು ದಿನಗಳ ಬಳಿಕ ಮಗನೂ ಪ್ರಾಣ ಬಿಟ್ಟ ಘಟನೆ ಪಟ್ಟಣದ ಜೀರಗಿ ಓಣಿಯಲ್ಲಿ ನಡೆದಿದೆ.
ಪಟ್ಟಣದ ಜೀರಿಗಿ ಓಣಿ ನಿವಾಸಿ ಅಮೀರ್ಬೀ ರಾಣೆಬೆನ್ನೂರ (90) ಆ. 12ರಂದು ವಯೋಸಹಜ ಕಾರಣದಿಂದಾಗಿ ಮರಣ ಹೊಂದಿದ್ದರು.
ಇವರ ಮಗ ಮೆಹಬೂಬಸಾಬ ರಾಣೆಬೆನ್ನೂರ (68) ತನ್ನ ತಾಯಿಯ 3 ದಿನಗಳ ಅಂತ್ಯಸಂಸ್ಕಾರದ ಎಲ್ಲ ಕ್ರಿಯಾ ವಿಧಾನಗಳನ್ನು ಮುಗಿಸಿ, ಆ. 14ರಂದು ಸಂಜೆ ತಾಯಿಯ ಮರಣದ ದುಃಖದಲ್ಲಿ ಸಾವನ್ನಪ್ಪಿದ್ದಾರೆ.
ಮೆಹಬೂಬಸಾಬ ರಾಣೆಬೆನ್ನೂರ 3 ವರ್ಷಗಳ ಕಾಲ ಸೈನಿಕ ವೃತ್ತಿಯನ್ನು ಮಾಡಿ, ಬಳಿಕ ದಾಂಡೇಲಿಯಲ್ಲಿ ಅರಣ್ಯ ಇಲಾಖೆಯಲ್ಲಿ 4 ವರ್ಷಗಳ ನೌಕರಿ ಮಾಡಿದ್ದರು.
ತಾಯಿಯ ಆರೈಕೆಗಾಗಿ ಕೆಲಸ ತ್ಯಜಿಸಿ ಬಂದಿದ್ದ ಮೆಹಬೂಬಸಾಬ್, ತಾನು ಮದುವೆಯಾದರೆ ಪತ್ನಿಯಾಗಿ ಬರುವವಳು ತನ್ನ ತಾಯಿಯ ಆರೈಕೆಗೆ ಅಡ್ಡಿಯಾಗುತ್ತಾಳೋ ಎಂಬ ಕಾರಣದಿಂದ ವಿವಾಹ ಆಗದೇ ತಾಯಿಯ ಸೇವೆಯಲ್ಲಿ ತೊಡಗಿಕೊಂಡಿದ್ದರು. ತಾಯಿಯ ಸೇವೆಗಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದ ಮೆಹಬೂಬಸಾಬ, ಸಾವಿನಲ್ಲೂ ತಾಯಿಯನ್ನೇ ಹಿಂಬಾಲಿಸಿದ್ದಾರೆ.
ಅಮೀರ್ಬೀ ಅವರಿಗೆ ಮೆಹಬೂಬಸಾಬ ಸೇರಿ ಐವರು ಪುತ್ರರು ಮತ್ತು 4 ಪುತ್ರಿಯರು ಇದ್ದರು. ಇದರಲ್ಲಿ ಮೂವರು ಪುತ್ರರು ಮರಣ ಹೊಂದಿದ್ದಾರೆ. ಉಳಿದ ಇಬ್ಬರು ಪುತ್ರರು ದೂರದೂರಲ್ಲಿ ವಾಸವಾಗಿದ್ದಾರೆ. ಪುತ್ರಿಯರಿಗೆ ವಿವಾಹವಾಗಿದ್ದು, ಬೇರೆಡೆ ನೆಲೆಸಿದ್ದಾರೆ.