ಸಾವಿನಲ್ಲೂ ಒಂದಾದ ತಾಯಿ, ಮಗ

13 AKR 01
Published on

ಅಕ್ಕಿಆಲೂರ: ಮಗನ ಸಾವಿನ ಸುದ್ದಿ ಕೇಳಿ ಆಘಾತಗೊಂಡು ಅಸ್ವಸ್ಥಳಾಗಿದ್ದ ತಾಯಿ ಮೃತಪಟ್ಟ ದಾರುಣ ಘಟನೆ ಸಮೀಪದ ಬಾಳಂಬೀಡ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.

ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನ ಬಡಾವಣೆ ನಿವಾಸಿ ಬಸವರಾಜ ರಾಮಣ್ಣ ತೆಪ್ಪದ (31) ಮತ್ತು ತಾಯಿ ಮೈನವ್ವ ತೆಪ್ಪದ (52) ಂಬುವರು ಸಾವಿನಲ್ಲೂ ಒಂದಾದ ತಾಯಿ-ಮಗ.

ಬಸವರಾಜ ಕಳೆದ ಒಂದು ವಾರದಿಂದ ಬಿಳಿ ಕಾಮಾಲೆ ಕಾಯಿಲೆಯಿಂದ ಬಳಲುತ್ತಿದ್ದರು. ತೀವ್ರ ಆರೋಗ್ಯ ಸಮಸ್ಯೆಯಿಂದ ಗುರುವಾರ ರಾತ್ರಿ ಮೃತಪಟ್ಟಿದ್ದರು. ಮಗನ ಸಾವಿನ ಸುದ್ದಿಯಿಂದ ತೀವ್ರ ಹೈರಾಣಾಗಿದ್ದ ಬಸವರಾಜನ ತಾಯಿ ಮೈನವ್ವ ಗುರುವಾರ ರಾತ್ರಿಯಿಡಿ ಮಗನ ಶವದ ಎದುರು ಕಣ್ಣೀರು ಹಾಕಿದ್ದಾರೆ. ಶುಕ್ರವಾರ ಬೆಳಗಿನ ಜಾವ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಅಕ್ಕಿಆಲೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಈ ವೇಳೆಗಾಗಲೇ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಅಕ್ಕಪಕ್ಕ ಅಂತ್ಯಕ್ರಿಯೆ: ಗ್ರಾಮದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿದ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಮೃತರ ಸಂಬಂಧಿಕರೊಂದಿಗೆ ತಾಯಿ- ಮಗನ ಶವವನ್ನು ಏಕಕಾಲಕ್ಕೆ ಅಂತಿಮ ಯಾತ್ರೆ ನಡೆಸಿ ಗ್ರಾಮದ ಹೊರವಲಯದ ವರದಾನದಿ ದಡದಲ್ಲಿ ಅಕ್ಕಪಕ್ಕ ಅಂತ್ಯ ಸಂಸ್ಕಾರ ನಡೆಸಿದರು.

ಗ್ರಾಮದಲ್ಲಿ ನೀರವ ಮೌನ: ಮೈನವ್ವ ಮತ್ತು ರಾಮಣ್ಣ ದಂಪತಿಗೆ ಏಕೈಕ ಪುತ್ರನಾಗಿದ್ದ ಬಸವರಾಜ ತೆಪ್ಪದ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಬಸವರಾಜ ತಾಯಿ ಜತೆಗೆ ವಾಸವಿದ್ದರು. ಏಕ ಕಾಲಕ್ಕೆ ತಾಯಿ ಮತ್ತು ಮಗ ಸಾವನ್ನಪ್ಪಿದ್ದರಿಂದ ಮನೆಗೆ ಯಾರೂ ದಿಕ್ಕಿಲ್ಲದಂತಾಗಿದೆ. ಇದರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net