

ಶಿರಸಿ: ಸರ್ಕಾರ ಅಸಂಘಟಿತ ಕಾರ್ವಿುಕರು, ಕೂಲಿಕಾರರು, ಕುಶಲಕರ್ವಿುಗಳಿಗೆ ಪ್ರೋತ್ಸಾಹಧನ ಮಂಜೂರು ಮಾಡಿ ಫಲಾನುಭವಿ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲ ರಾಷ್ಟ್ರೀಕೃತ ಬ್ಯಾಂಕ್ಗಳು ಫಲಾನುಭವಿಗೆ ಹಣ ನೀಡದೆ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವುದು ಕಾರ್ವಿುಕರನ್ನು ಸಂಕಷ್ಟಕ್ಕೆ ನೂಕಿದೆ.
ಕರೊನಾ ಮೊದಲ ಅಲೆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪ್ಯಾಕೇಜ್ ಅನ್ವಯ ಹಣ ಪಡೆದ ಕೂಲಿ ಕಾರ್ವಿುಕರ ಬ್ಯಾಂಕ್ ಖಾತೆಗಳಿಗೆ ಪ್ರಸಕ್ತ ಸಾಲಿನಲ್ಲೂ ಪ್ರೋತ್ಸಾಹ ಧನ ಜಮಾ ಆಗಿದೆ. ಕಳೆದ ವರ್ಷ ಪ್ರೋತ್ಸಾಹ ಧನ ಸ್ವೀಕರಿಸದವರು ಅಗತ್ಯ ದಾಖಲಾತಿಗಳ ಜತೆಗೆ ಅರ್ಜಿ ಸಲ್ಲಿಸಲು ಜೂ. 30ರವರೆಗೂ ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆ ಕೆಲ ಬ್ಯಾಂಕ್ನವರು ಸರ್ಕಾರ ಜಮಾ ಮಾಡಿದ ಹಣದಲ್ಲಿ ಹಿಂದಿನ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ.
ಕಂಗಾಲಾದ ಕಾರ್ವಿುಕರು: ರಾಜ್ಯ ಸರ್ಕಾರ ಪ್ರೋತ್ಸಾಹ ಧನದ ಪ್ಯಾಕೇಜ್ ಘೊಷಣೆ ಮಾಡಿ ಅಸಂಘಟಿತ ವಲಯದ ಕಾರ್ವಿುಕರ ಬ್ಯಾಂಕ್ ಖಾತೆಗೆ 2 ಮತ್ತು 5 ಸಾವಿರ ರೂ.ಗಳನ್ನು ಈಗಾಗಲೇ ಜಮಾ ಮಾಡುತ್ತಿದೆ. ಈ ಹಣವನ್ನು ಫಲಾನುಭವಿಗಳು ಪಡೆಯಲು ಬ್ಯಾಂಕಿಗೆ ತೆರಳಿದರೆ ಸರ್ಕಾರದ ಪ್ರೋತ್ಸಾಹ ಧನ ಸಾಲದ ಖಾತೆಗೆ ಜಮಾ ಮಾಡಲಾಗಿದೆ. ಮೊಬೈಲ್ಗೆ ಸಹ ಸಾಲದ ಖಾತೆಗೆ ಹಣ ಜಮಾ ಆಗಿರುವ ಸಂದೇಶ ರವಾನೆಯಾಗುತ್ತಿದೆ. ಇದರಿಂದ ಈಗಾಗಲೇ ಕೆಲಸವಿಲ್ಲದೆ ಆರ್ಥಿಕವಾಗಿ ಕುಸಿದಿರುವ ಕಾರ್ವಿುಕರು ಮತ್ತಷ್ಟು ಕಂಗಾಲಾಗಿದ್ದಾರೆ.
ಕಂತು ಪಾವತಿಸುವಲ್ಲಿ ವಿಳಂಬ: ಸರ್ಕಾರ ಘೊಷಣೆ ಮಾಡಿದ ಪ್ಯಾಕೇಜ್ ಹಣ ನೇರವಾಗಿ ಫಲಾನುಭವಿಗಳಿಗೆ ವಿತರಿಸಬೇಕು. ಸಾಲದ ಖಾತೆಗೆ ಜಮಾ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಆದೇಶ ಮಾಡಿದ್ದರೂ ಕೆಲ ಬ್ಯಾಂಕ್ಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿವೆ. ಕಳೆದ ವರ್ಷದಿಂದ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತವಾಗಿರುವುದರಿಂದ ಯೋಜನೆಯ ಕೆಲ ಫಲಾನುಭವಿಗಳು ಸಾಲದ ಕಂತನ್ನು ಪಾವತಿಸುವಲ್ಲಿ ವಿಳಂಬ ಮಾಡಿದ್ದಾರೆ. ಇನ್ನೂ ಹಲವರು ಸಾಲ ಮರುಪಾವತಿಯನ್ನೇ ಮಾಡಿಲ್ಲ. ಹೀಗಾಗಿ ಬ್ಯಾಂಕ್ನ ಆರ್ಥಿಕ ಭದ್ರತೆ ಕಾಪಾಡಿಕೊಳ್ಳಲು ಸರ್ಕಾರ ನೀಡಿದ ಮೊತ್ತವನ್ನು ಆಯಾ ಫಲಾನುಭವಿಯ ಸಾಲದ ಖಾತೆಗೆ ಜಮಾ ಮಾಡುವುದು ಅನಿವಾರ್ಯ ಎಂದು ಕೆಲ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಸರ್ಕಾರ ಅಸಂಘಟಿತ ಕಾರ್ವಿುಕರಿಗೆ, ಕುಶಲಕರ್ವಿುಗಳಿಗೆ ಪ್ರೋತ್ಸಾಹ ಧನ ನೀಡಿದೆ. ಕುಶಲಕರ್ವಿುಗಳ ಬ್ಯಾಂಕ್ ಖಾತೆಗೆ ಪ್ರೋತ್ಸಾಹ ಧನ ಜಮಾ ಆಗಿದ್ದು, ಕೆಲ ಬ್ಯಾಂಕ್ಗಳು ಪ್ರೋತ್ಸಾಹ ಧನವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಪ್ರೋತ್ಸಾಹ ಧನ ಸಾಲದ ಖಾತೆಗೆ ಜಮಾ ಮಾಡಿಕೊಳ್ಳದಂತೆ ಸೂಚನೆ ನೀಡಿದರೂ ಬ್ಯಾಂಕ್ನವರ ನಡೆ ಪುನರಾವರ್ತನೆಯಾಗುತ್ತಿದೆ.| ಧರಣೇಶ ನಾಯ್ಕ ಫಲಾನುಭವಿ
ಕರೊನಾ ಲಾಕ್ಡೌನ್ ಹಾಗೂ ಇತರ ಕಾರಣಕ್ಕಾಗಿ ಕುಶಲಕರ್ವಿುಗಳು, ಅಸಂಘಟಿತ ವಲಯದ ಕಾರ್ವಿುಕರು, ಬೀದಿಬದಿ ವ್ಯಾಪಾರಿಗಳಿಗೆ ಬದುಕು ನಡೆಸುವುದು ಕಷ್ಟವಾದ ಕಾರಣ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡಿದೆ. ಆ ಮೊತ್ತವನ್ನು ಬ್ಯಾಂಕಿನವರು ಫಲಾನುಭವಿಯ ಸಾಲದ ಖಾತೆಗೆ ಜಮಾ ಮಾಡಿಕೊಳ್ಳದೆ ಆಯಾ ಫಲಾನುಭವಿಗಳಿಗೆ ನೀಡಬೇಕು. ಈ ಬಗ್ಗೆ ಎಲ್ಲ ಬ್ಯಾಂಕ್ಗಳ ಮುಖ್ಯಸ್ಥರಿಗೆ ಮತ್ತೊಮ್ಮೆ ಸೂಚಿಸಲಾಗುವುದು.| ಶಿವರಾಮ ಹೆಬ್ಬಾರ ಕಾರ್ವಿುಕ ಸಚಿವ