ಸಾಲ ಮರು ಪಾವತಿ ಮಾಡದ ಶಾಲೆ ಬಂದ್

1001808976
Published on

ಶ್ರೀರಂಗಪಟ್ಟಣ: ಬ್ಯಾಂಕಿನಿಂದ ಪಡೆದ ಸಾಲ ಮರು ಪಾವತಿ ಮಾಡದ ಹಿನ್ನೆಲೆ ಡಿಕೆಶಿ ಆಪ್ತ ಹಾಗೂ ಕೈ ಮುಖಂಡನ ಖಾಸಗಿ ಶಿಕ್ಷಣ ಸಂಸ್ಥೆಗೆ ಖಾಸಗಿ ಬ್ಯಾಂಕಿನಿಂದ ಬೀಗ ಜಡಿದಿದ್ದು, ಇದೀಗ ಶಿಕ್ಷಣ ವಂಚಿತರಾಗಿ ಅತಂತ್ರರಾದ ವಿದ್ಯಾರ್ಥಿಗಳ ಪಾಲಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಹಳೇ ಕಿರಂಗೂರು ಗ್ರಾಮದ ಪಾಂಡವಪುರ-ಶ್ರೀರಂಗಪಟ್ಟಣ ರಸ್ತೆಯಲ್ಲಿರುವ ಕೇಂಬ್ರಿಡ್ಜ್ ಸ್ಕೂಲ್ ಮತ್ತು ಕಾಲೇಜಿಗೆ ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಬ್ಯಾಂಕ್ ಅಧಿಕಾರಿಗಳು ಬೀಗ ಜಡಿದಿದ್ದು, ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶಿಕ್ಷಣ ಅತಂತ್ರವಾಗಿದೆ.

ತಾಲೂಕಿನ ಕಿರಂಗೂರು ಗ್ರಾಮದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತ ಹಾಗೂ ಕೆ.ಆರ್.ಪೇಟೆ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್ ಅವರ ಒಡೆತನದ ಕೇಂಬ್ರಿಡ್ಜ್ ಸ್ಕೂಲಿನ ಆಡಳಿತ ಮಂಡಳಿ ಮಾಡಿರುವ ಯಡವಟ್ಟಿಗೆ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದೀಗ ಕುತ್ತು ಬಂದಿದ್ದು, ಸಾಲ ಸೋಲ ಮಾಡಿ ಶುಲ್ಕ ಕಟ್ಟಿ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದ ಪಾಲಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಮೂಲತಃ ಕೆ.ಆರ್.ಪೇಟೆ ತಾಲೂಕಿನ ಹರಳಹಳ್ಳಿ ಗ್ರಾಮದ ವಿಶ್ವನಾಥ್ ಬೆಂಗಳೂರಿನ ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಕೋಟ್ಯಂತರ ರೂ.ಸಾಲ ಮಾಡಿದ್ದು, ಮರು ಪಾವತಿ ಮಾಡಿಲ್ಲ. ಈ ಸಂಬಂಧ ಬ್ಯಾಂಕಿನವರು ಹಲವು ಬಾರಿ ನೋಟಿಸ್ ನೀಡಿದ್ದರೂ ಸರಿಯಾಗಿ ಸ್ಪಂದಿಸದ ಕಾರಣ ಈ ಹಿಂದೆಯೇ ಎಚ್ಚರಿಕೆ ನೀಡಿ ಸೀಜ್ ಮಾಡಲು ಮುಂದಾಗಿತ್ತು. ಆದರೆ ಸಾಲ ಮರು ಪಾವತಿ ಮಾಡಲು ಕಾಲಾವಕಾಶ ಕೇಳಿದ ಸಂಸ್ಥೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಕದ್ದು ಮುಚ್ಚಿ ತರಗತಿ ನಡೆಸುತ್ತಿದ್ದರು.

3 ದಿನಗಳ ಕಾಲ ಮಳೆ ಇದ್ದ ಕಾರಣ ಪ್ರಿಕೆಜಿಯಿಂದ ಪಿಯುಸಿ ತರಗತಿಗಳ ವಿದ್ಯಾರ್ಥಿಗಳಿಗೆ ರಜೆ ಇದ್ದು, ಶನಿವಾರ ಆರಂಭವಾದ ಸಮಯದಲ್ಲಿ ಆಗಮಿಸಿದ ಬ್ಯಾಂಕಿನವರು ವಿದ್ಯಾರ್ಥಿಗಳನ್ನು ಹೊರ ಕಳುಹಿಸಿ ಶಾಲೆಗೆ ಬೀಗ ಜಡಿದು ನೋಟಿಸ್ ಹಾಕಿದ್ದಾರೆ.

ಇದೀಗ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಮುಂದಿನ ಪರಿಸ್ಥಿತಿ ನೆನೆದು ಶಾಲಾ ಆಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಮಂಡ್ಯ ರಕ್ಷಣಾ ವೇದಿಕೆ ಸಂಘಟನೆ ನೇತೃತ್ವದಲ್ಲಿ ಶಾಲಾ ಆಡಳಿತ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮರವೇ ಅಧ್ಯಕ್ಷ ಶಂಕರ್ ಬಾಬು ಮಕ್ಕಳಿಗೆ ಪರೀಕ್ಷಾ ಸಮಯ ಸಮೀಪದಲ್ಲಿ ಈ ರೀತಿ ಮಾನಸಿಕ ಶೋಷಣೆಯಾಗುವುದನ್ನು ತಕ್ಷಣ ತಪ್ಪಿಸಿ ಎಂದು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಹಾರಿಕೆ ಉತ್ತರ: ತಾಲೂಕಿನ ಹಳೇ ಕಿರಂಗೂರು ಗ್ರಾಮದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ಹಣಕಾಸಿನ ವಿಚಾರವಾಗಿ ಶಾಲೆ ಬಂದ್ ಹಾಗೂ ವಿದ್ಯಾರ್ಥಿಗಳ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ.ಮಹೇಶ್, ಪ್ರಸ್ತುತ ಹಣಕಾಸಿನ ವಿಚಾರವಾಗಿ ಶಾಲಾ ಆಡಳಿತವನ್ನು ಬ್ಯಾಂಕ್ ಬಂದ್ ಮಾಡಿದೆ. ಈ ಬಗ್ಗೆ ಡಿಡಿಪಿಐಗೆ ವರದಿ ನೀಡಿದ್ದೇವೆ, ವಿದ್ಯಾರ್ಥಿಗಳ ಮುಂದಿನ ವ್ಯವಸ್ಥೆ ಹಾಗೂ ಕಲ್ಪಿಸಬೇಕಾದ ಎಲ್ಲ ವ್ಯವಸ್ಥೆ ಕುರಿತು ಡಿಡಿಪಿಐ ನಿರ್ಧಾರ ಮಾಡಬೇಕಿದೆ ಹೊರತು ನಾವು ಯಾವ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಪ್ರಶ್ನಿಸಿದ ಮಾಧ್ಯಮಗಳಿಗೆ ಹಾರಿಕೆ ಉತ್ತರ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net