

ಹಳಿಯಾಳ: ಪ್ರಧಾನಮಂತ್ರಿ ಆವಾಸ್ ಹಾಗೂ ವಿವಿಧ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್ಗಳು ಆರ್ಥಿಕ ಸೌಲ ಸೌಲಭ್ಯಗಳನ್ನು ನೀಡಬೇಕು. ಇಲ್ಲವಾದಲ್ಲಿ ನಾನು ಪ್ರಧಾನ ಮಂತ್ರಿ ಹಾಗೂ ಕೇಂದ್ರ ಹಣಕಾಸು ಮಂತ್ರಿಗೆ ಪತ್ರ ಬರೆಯುತ್ತೇನೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಎಚ್ಚರಿಸಿದ್ದಾರೆ.
ಶುಕ್ರವಾರ ಸಂಜೆ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಕರೆದ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ, ಪುರಸಭೆ, ಕೊಳಚೆ ಮಂಡಳಿ ಮತ್ತು ಹೌಸಿಂಗ್ ಬೋರ್ಡ್ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಡವರ ನೋವು ಸಂಕಷ್ಟಗಳ ಅರಿವು ಬ್ಯಾಂಕ್ನವರಿಗೆ ಇರಬೇಕು ಎಂದರು. ವಸತಿ ಯೋಜನೆಗಳಿಗೆ ಸಾಲ ಸೌಲಭ್ಯಗಳು ನೀಡುವಂತೆ ರಾಷ್ಟ್ರೀಕೃತ ಬ್ಯಾಂಕ್ಗಳ ಸಭೆಯನ್ನು ರಾಜ್ಯ ಸರ್ಕಾರ ಮಾಡಿದ್ದು, ಸೂಕ್ತ ನಿರ್ದೇಶನಗಳನ್ನು ಕಳಿಸಿದ್ದು, ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿಯನ್ನು ವಹಿಸಿದೆ. ಜಿ-ಪ್ಲಸ್ 2 ಯೋಜನೆಯಡಿಯಲ್ಲಿ ಬಾಕಿ ಉಳಿದಿರುವ 264 ಮನೆಗಳ ನಿರ್ವಣಕ್ಕೆ ಬೇಕಾದ ಸಾಲ ಸೌಲಭ್ಯಗಳನ್ನು ನೀಡಲು ಪಟ್ಟಣದಲ್ಲಿರುವ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳು ಮುಂದಾಗಬೇಕು, ತಹಸೀಲ್ದಾರ್ ಸಭೆ ನಡೆಸಿ ಸಾಲ ಸೌಲಭ್ಯಗಳನ್ನು ನೀಡಲು ಬ್ಯಾಂಕ್ಗಳಿಗೆ ಮನೆಗಳನ್ನು ಹಂಚಿಕೆ ಮಾಡಿ ಎಂದರು.
ಕೆಡಿಸಿಸಿ ಬ್ಯಾಂಕ್ ನೆರವು: ಪಟ್ಟಣದಲ್ಲಿ ಜಿ-ಪ್ಲಸ್ 2 ವಸತಿ ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ ನಿರ್ವಣಗೊಂಡ ಮನೆಗಳಿಗೆ ಕೆಡಿಸಿಸಿ ಬ್ಯಾಂಕ್ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಲು ಮುಂದಾಗಿದೆ ಎಂದು ದೇಶಪಾಂಡೆ ಹೇಳಿದರು. ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಅವರು ನನ್ನ ಮನವಿಗೆ ಸ್ಪಂದಿಸಿದ್ದು ಶೇ. 7 ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಕೊಳಚೆ ಮಂಡಳಿ ಯೋಜನೆ: ಪಟ್ಟಣದಲ್ಲಿ ಕೊಳಚೆ ಮಂಡಳಿಯಿಂದ ಕೈಗೊಂಡಿರುವ ಮನೆ ನಿರ್ವಣದ ಯೋಜನೆಯ ಮಾಹಿತಿಯನ್ನು ನೀಡಿದ ಇಲಾಖೆಯ ಇಂಜಿನಿಯರ್ ಪಟ್ಟಣದಲ್ಲಿ 213 ಮನೆಗಳು ಮಂಜೂರಾಗಿದ್ದು, ಅದರಲ್ಲಿ 186 ಮನೆಗಳು ಪೂರ್ಣವಾಗಿ ಮುಗಿದಿವೆ. ಮನೆ ನಿರ್ವಣಕ್ಕೆ 5.39ಲಕ್ಷ ರೂಪಾಯಿ ವೆಚ್ಚವಾಗುತ್ತಿದ್ದು, ಇದರಲ್ಲಿ ಸಬ್ಸಿಡಿ 3.50 ಲಕ್ಷ ರೂಪಾಯಿ ಇದೆ. ಬಾಕಿ ಇರುವ ಹಣವನ್ನು ಫಲಾನುಭವಿಗಳೇ ತುಂಬಬೇಕಾಗಿದ್ದು, ಫಲಾನುಭವಿಗಳು ಬ್ಯಾಂಕ್ನಿಂದ ಸಾಲ ಸೌಲಭ್ಯ ಪಡೆಯಲು ಮುಂದಾಗುತ್ತಿಲ್ಲ, ಬದಲಾಗಿ ಕಾಮಗಾರಿ ಪೂರ್ಣಗೊಂಡ ಮನೆಯಲ್ಲಿ ನೆಲೆಸಲು ಆರಂಭಿಸಿದ್ದಾರೆ ಎಂದರು.
ಸಭೆಯಲ್ಲಿ ವಿ.ಪ ಸದಸ್ಯ ಎಸ್.ಎಲ್. ಘೊಟ್ನೇಕರ, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಪುರಸಭೆ ಅಧ್ಯಕ್ಷ ಅಜರ್ ಬಸರಿಕಟ್ಟಿ, ಉಪಾಧ್ಯಕ್ಷೆ ಸುವರ್ಣ ಮಾದರ, ಸ್ಥಾಯಿ ಸಮಿತಿ ಚೇರ್ಮನ್ ಅನಿಲ ಚವ್ಹಾಣ, ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಇದ್ದರು.
ಆಶ್ರಯ ಮನೆಗಳಿಗೂ ನವೀಕರಣ ಭಾಗ್ಯ: ಪಟ್ಟಣದ ಆಶ್ರಯ ಬಡಾವಣೆಗಳಲ್ಲಿರುವ ಹಳೆಯ ಶಿಥಿಲಗೊಂಡಿರುವ ಆಶ್ರಯ ಮನೆಗಳನ್ನು ಕೊಳಚೆ ಮಂಡಳಿಯಿಂದ ಮರು ನಿರ್ವಿುಸುವ ಸಾಧ್ಯತೆಗಳ ಕುರಿತು ವಸತಿ ಇಲಾಖೆಯ ರಾಜ್ಯದ ಹಿರಿಯ ಇಲಾಖೆಯೊಂದಿಗೆ ದೇಶಪಾಂಡೆ ಫೋನ್ ಮೂಲಕ ರ್ಚಚಿಸಿದರು. 25 ವರ್ಷಕ್ಕೂ ಹಿಂದೆ ನಿರ್ವಿುಸಿದ ಆಶ್ರಯ ಮನೆಗಳನ್ನು ತೆರವುಗೊಳಿಸಿ ಕೊಳಚೆ ಮಂಡಳಿಯು ಹೊಸ ಮನೆಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ಕಟ್ಟಿಸಿ ಕೊಟ್ಟಿದೆ ಎಂದು ಕೊಳಚೆ ಮಂಡಳಿಯ ಅಧಿಕಾರಿ ಸಭೆಗೆ ತಿಳಿಸಿದರು. ಈ ಕುರಿತು ಪುರಸಭೆಯಿಂದ ಠರಾವು ಪಾಸು ಮಾಡಿ ಮಂಡಳಿಗೆ ಬೇಡಿಕೆ ಪ್ರಸ್ತಾವಣೆಯನ್ನು ಸಲ್ಲಿಸಬೇಕು ಎಂದರು. ಈ ಕುರಿತು ಶನಿವಾರ ಆಶ್ರಯ ಸಭೆಯನ್ನು ಕರೆಯುವಂತೆ ಪುರಸಭೆ ಮುಖ್ಯಾಧಿಕಾರಿಗೆ ಶಾಸಕರು ಸೂಚಿಸಿದರು.