ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ

1 (27)
Published on

ಬಾಗಲಕೋಟೆ: ಪಟಾಕಿ ವ್ಯಾಪಾರಿಗಳಿಗೆ ಯಾವುದೇ ಅಡಚಣೆಯಾಗದಂತೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು. ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಜಿಲ್ಲಾಡಳಿತದ ಮೊದಲ ಆದ್ಯತೆ ಆಗಲಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.

ನವನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ವಿವಿಧ ತಾಲೂಕುಗಳ ಪಟಾಕಿ ಲೈಸೆನ್ಸ್ ಗಳ ನವೀಕರಣ ಹಾಗೂ ತಾತ್ಕಾಲಿಕ ಸಿಡಿಮದ್ದು, ಪಟಾಕಿ ಲೈಸೆನ್ಸ್ ಗಳಿಗೆ ಅನುಮತಿ ನೀಡುವ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಪಟಾಕಿ ಒಂದು ಸ್ಫೋಟಕ ವಸ್ತುವಾದ ಕಾರಣ, ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಜನವಸತಿ ಅಥವಾ ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ. ಹಾಗೆಯೇ ಪಟಾಕಿ ವ್ಯಾಪಾರಿಗಳಿಗೂ ತೊಂದರೆಯಾಗದಂತೆ ಆಟದ ಮೈದಾನ,ಕ್ರೀಡಾಂಗಣ ಅಥವಾ ಎ.ಪಿ.ಎಂ.ಸಿ ಯಾರ್ಡ್ ನಂತಹ ಸರ್ಕಾರಿ ವಿಶಾಲ ಜಾಗಗಳನ್ನು ಗುರುತಿಸಿ ಪಟಾಕಿ ವ್ಯಾಪಾರಿಗಳಿಗೆ ಅನುಮತಿ ನೀಡಲಾಗುವುದು ಎಲ್ಲರೂ ಅಲ್ಲಿಯೇ ತಮ್ಮ ತಮ್ಮ ಮಳಿಗೆಗಳನ್ನು ಹಾಕಿಕೊಂಡು ವ್ಯಾಪಾರ ಮಾಡಬಹುದು ಎಂದರು.

2024ರ ನಿಯಮಗಳ ಪ್ರಕಾರ ಜಿಲ್ಲೆಯ ಪಟಾಕಿ ವ್ಯಾಪಾರಿಗಳ ಲೈಸೆನ್ಸ್ ನವೀಕರಣದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ವರದಿ ನೀಡಲು ಅಗ್ನಿಶಾಮಕ ಅಧಿಕಾರಿ, ತಹಶೀಲ್ದಾರ್ ಮತ್ತು ಸ್ಥಳೀಯ ಅಧಿಕಾರಿಗಳನ್ನು ಹೊಂದಿದ ಸಮಿತಿ ರಚಿಸಲಾಗುವುದು. ಸಮಿತಿ ವರದಿ ನೀಡಲು ಮೂರು ದಿನಗಳ ಗಡುವು ನೀಡಲಾಗಿದ್ದು, ಅದರ ಶಿಫಾರಸ್ಸಿನಂತೆ ಲೈಸೆನ್ಸ್ ಗಳನ್ನು ನವೀಕರಣ ಅಥವಾ ತಿರಸ್ಕೃತ ಮಾಡಲಾಗುವುದು. ಅಲ್ಲದೇ ಗಣೇಶ ಹಬ್ಬದ ಪ್ರಯುಕ್ತ ಐದು ದಿನಗಳ ವ್ಯಾಪಾರಕ್ಕೆ ತಾತ್ಕಾಲಿಕ ಲೈಸೆನ್ಸ್ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೆರ ಮಾತನಾಡಿ ಗಣೇಶ ಚತುರ್ಥಿ ನಿಮಿತ್ಯ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಮಾರಾಟ ಮಾಡಲು ಸ್ಥಳ ನಿಗದಿಪಡಿಸಲಾಗುತ್ತಿದ್ದು,. ಮಾರಾಟಗಾರರು ಅನುಮತಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಲಾಗುವುದು. ತಹಶೀಲ್ದಾರ ಹಾಗೂ ಪೊಲೀಸ್, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ, ನಿಯಮಾನುಸಾರ ಕ್ರಮಕೈಗೊಳ್ಳಬೇಕು. ಯಾವುದೇ ಹಾನಿ, ಅವಘಡ ಉಂಟಾದಲ್ಲಿ ಪಟಾಕಿ ಅಂಗಡಿಗಳ ಮಾಲೀಕರು ನೇರಹೊಣೆ ಆಗುತ್ತಾರೆ. ತಹಶೀಲ್ದಾರ ನೀಡುವ ವರದಿ ಆದಾರದ ಮೇಲೆ ಕ್ರಮಕೈಗೊಳ್ಳಲಾಗುವುದು. ಬಾಗಲಕೋಟೆಯಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನೀಡಲು ಚಿಂತನೆಯಿದೆ.. ಬದಾಮಿ ಹಾಗೂ ಗುಳೇದಗುಡ್ಡ ಪಟ್ಟಣದಲ್ಲಿ ಮಾರಾಟ ಕೇಂದ್ರಕ್ಕೆ ಸೂಕ್ತ ಸ್ಥಳ ಗುರುತಿಸಿ, ಶಿಫಾರಸ್ಸು ಮಾಡುವಂತೆ ಬದಾಮಿ ತಹಶೀಲ್ದಾರರಿಗೆ ಅವರು ಸೂಚಿಸಿದರು.

ಜಿಲ್ಲಾದ್ಯಂತ ಸ್ವೀಕರಿಸಿಸಲಾದ ಪಟಾಕಿ ವ್ಯಾಪಾರಿಗಳ ಲೈಸೆನ್ಸಗಳ ಪರಿಶೀಲನೆ, ತಿರಸ್ಕೃತಗೊಂಡ ಅರ್ಜಿಗಳಿಗೆ ಕಾರಣ, ವಿವಿಧ ತಾಲೂಕುಗಳಲ್ಲಿ ಮಳಿಗೆ ತೆರೆಯಲು ಗುರುತಿಸಲಾದ ಸ್ಥಳ, ಮತ್ತು ವಿವಿಧ ಸುರಕ್ಷತಾ ಕ್ರಮಗಳ ಕುರಿತು ಸಭೆಯಲ್ಲಿ ಆಯಾ ತಾಲೂಕು ತಹಶೀಲ್ದಾರ್ ಗಳೊಂದಿಗೆ ಚರ್ಚಿಸಲಾಯಿತು.

ಸಭೆಯಲ್ಲಿ ತೇಲಿ, ಜಿಲ್ಲಾ ಪಂಚಾಯತ್ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಪ್ರಕಾಶ ಪವಾರ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಪಟಾಕಿ ವ್ಯಾಪಾರಿಗಳ ಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net