ಸಾಯಿಬಾಬ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ

6 mlv2
Published on

ಮಳವಳ್ಳಿ: ಪಟ್ಟಣಕ್ಕೆ ಸಮೀಪದ ಶೆಟ್ಟಹಳ್ಳಿ ಗ್ರಾಮದ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಸಾಯಿ ಮಂದಿರದಲ್ಲಿ ಗುರುವಾರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಿತು.

ಸಾಯಿಬಾಬ ಪರಮ ಭಕ್ತರಾದ ಎಂ.ರಾಮಕೃಷ್ಣ ಅವರು ಸುಮಾರು ಎಂಟು ಎಕರೆ ಪ್ರದೇಶದಲ್ಲಿ ಬಿ.ಎಂ.ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲು ಸಿದ್ಧತೆ ನಡೆಸಿದ್ದು, ಇಲ್ಲಿನ ಶಾಲಾ ಆವರಣದಲ್ಲೇ ನಿರ್ಮಾಣ ಮಾಡಿಸಿರುವ ಸಾಯಿಬಾಬ ಮಂದಿರದ ಕಳಶ ಹಾಗೂ ಸಾಯಿಬಾಬ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಪೂಜಾ ಕೈಂಕರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗಿನಿಂದಲೇ ಮಂದಿರದಲ್ಲಿ ಪುರೋಹಿತರ ತಂಡ ಹೋಮ-ಹವನಗಳನ್ನು ನೆರವೇರಿಸಿ ಪೂಜಾ ಕಾರ್ಯವನ್ನು ಸಮಾಪ್ತಿಗೊಳಿಸಿದರು.

ಇದೇ ವೇಳೆ ಬಿ.ಎಂ.ಪಬ್ಲಿಕ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಎಂ.ರಾಮಕೃಷ್ಣ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಮಕ್ಕಳಿಗೆ ಕೇಂದ್ರೀಯ ಪಠ್ಯ ಕ್ರಮದ ಸಿಬಿಎಸ್‌ಸಿ ವಿಷಯ ಆಧಾರಿತ ಗುಣಾತ್ಮಕ ಶಿಕ್ಷಣ ದೊರಕಿಸಬೇಕೆಂಬ ಉದ್ದೇಶದಿಂದ ಸುಸಜ್ಜಿತ ಶಾಲೆಯನ್ನು ಆರಂಭಿಸುತ್ತಿದ್ದೇವೆ. 3ವರ್ಷದವರೆಗಿನ ಮಕ್ಕಳಿಗೆ ಮಾಂಟೆಸ್ಸೆರಿ ಮಾದರಿ ಶಿಕ್ಷಣ ನಂತರ 1ರಿಂದ 7ನೇ ತರಗತಿವರೆಗೆ ತರಗತಿಗಳನ್ನು ಆರಂಭಿಸಲಾಗುತ್ತಿದೆ ಎಂದರು.

ಗುಣಮಟ್ಟದ ಶಿಕ್ಷಣ ದೊರಕಿಸಬೇಕೆಂಬ ಸದುದ್ದೇಶದಿಂದ ಸಿಬಿಎಸ್ಸಿ ಪಠ್ಯಕ್ರಮದ ಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ. ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ಹಾಗೂ ಸಾರಿಗೆ ವ್ಯವಸ್ಥೆಯನ್ನು ಒಳಗೊಂಡ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಶಾಲೆ ಪ್ರಾರಂಭೋತ್ಸವ ಸಮಾರಂಭವನ್ನು ಮಾ.9ರಂದು ಹಮ್ಮಿಕೊಳ್ಳಲಾಗಿದೆ. ಶಾಲೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು. ಸಾಯಿಬಾಬ ಮಂದಿರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಜಿ.ಟಿ.ದೇವೇಗೌಡ, ಕೆ.ಎಂ.ಉದಯ್, ರವಿಕುಮಾರ್ ಗಣಿಗ, ರಮೇಶ್ ಬಂಡಿಸಿದ್ದೇಗೌಡ, ಮಾಜಿ ಸಂಸದ ಡಿ.ಕೆ.ಸುರೇಶ್ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಮುಖಂಡರಾದ ಸತೀಶ್, ಮಲ್ಲಯ್ಯ, ಟಿ.ಎಂ.ಪ್ರಕಾಶ್, ಎಂ.ಎಚ್.ಕೆಂಪಯ್ಯ, ಚಿಕ್ಕರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net