ಸಾಮಾಜಿಕ ಸೇವೆ ಸ್ಮರಣಿಯ

bkt-31-3
ಬಾಗಲಕೋಟೆ ನಗರದ ಬಿವಿವಿ ಸಂಘದ ಆವರಣದಲ್ಲಿರುವ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಬೀಳೂರ ಮಹಾಸ್ವಾಮಿಗಳ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
Published on

ಬಾಗಲಕೊಟೆ: ಸರ್ವಧರ್ಮಿಯರು ಶಿಕ್ಷಣವಂತರಾಗಿ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿಗೆ ವೀರಶೈವ ಲಿಂಗಾಯತ ಮಠಗಳ ಸಾಮಾಜಿಕ ಕಳಕಳಿ ಕಾರಣವಾಗಿದೆ. ಬೀಳೂರ ಗುರುಬಸವ ಮಹಾಸ್ವಾಮಿಗಳಿಗೆ ಬಡತನದ ಅರಿವು ಇತ್ತು, ಸರ್ವಜನರಿಗೂ ಶಿಕ್ಷಣ ಸಿಗಲಿ ಎಂಬ ಮಹಾದಾಸೆಯಿಂದ ಸ್ಥಾಪಿತವಾದ ಬಿವಿವಿ ಸಂಘವು ಜ್ಞಾನ ಜೀವನ ದಾರೆ ಎರೆಯುತ್ತಿದೆ ಎಂದು ಚರಂತಿಮಠದ ಪ್ರಭು ಸ್ವಾಮೀಜಿ ಹೇಳಿದರು.

ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಘದ ಸಂಸ್ಥಾಪಕ ಬೀಳೂರ ಗುರುಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ಶ್ರಾವಣ ಮಾಸದ ಉತ್ಸವ ಮತ್ತು ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಠ ಮಾನ್ಯಗಳ ನೇತೃತ್ವದಲ್ಲಿ ಜನರು ನೀಡಿದ ಧಾನದಿಂದಲೆ ಅನೇಕ ಶಿಕ್ಷಣ ಸಂಸ್ಥೆಗಳು ಜ್ಞಾನದಾಸೋಹದಲ್ಲಿ ತೊಡಗಿವೆ. ಬೀಳೂರು ಶ್ರೀಗಳ ಮಹಾಸಂಕಲ್ಪಕ್ಕೆ ಕೈ ಜೋಡಿಸಿದ ಬಾಗಲಕೋಟೆ ನಗರದ ಅನೇಕ ಜನ ವರ್ತಕರು, ಶಿಕ್ಷಣ ಧಾನಿಗಳ ಸಾಮಾಜಿಕ ಸೇವೆ ಸ್ಮರಣಿಯವಾಗಿದೆ. ಕಾಲಕಾಲಕ್ಕೆ ಅವರನ್ನು ನೆನಪಿಸಿಕೊಳ್ಳುವುದು ಅಗತ್ಯ. ಶ್ರೀಗಳ ಜೀವನ ವೃತ್ತಾಂತದ ಗ್ರಂಥ ವಾಸ್ತವದೊಂದಿಗೆ ಇತಿಹಾಸದ ದಾಖಲೆಯನ್ನು ಬಿಚ್ಚಿಡುತ್ತದೆ. ಇಂದು ಪ್ರತಿಮನೆಯಲ್ಲೂ ಉತ್ತಮ ಗ್ರಂಥಗಳ ಓದುವಿಕೆ ಅಗತ್ಯವಾಗಿದೆ ಎಂದರು.

ಬಿವಿವಿ ಸಂಘದ ಸ್ಥಾಪನೆಯಾದ ನಂತರದಿಂದ ಇಲ್ಲಿಯವರೆಗೂ ಅನೇಕ ಜನ ಕಾರ್ಯಾಧ್ಯಕ್ಷರು ಸಂಘದ ಬೆಳವಣಿಗೆಯಲ್ಲಿ ತಮ್ಮದೆಯಾದ ಸೇವೆ ಸಲ್ಲಿಸಿದ್ದಾರೆ. ಈಗಿನ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರಿಗೆ ಮಠಗಳ ಹಾಗೂ ಸ್ವಾಮಿಗಳ ಸಂಪರ್ಕ ಹೆಚ್ಚಾಗಿರುವುದರಿಂದ ಮತ್ತು ಅವರ ಹೆಚ್ಚಿನ ಓದುವಿಕೆ ಅಪಾರ ಜ್ಞಾನ, ಶಿಸ್ತು ಹಾಗೂ ಅವರ ಸಾಮಾಜಿಕ ಕಳಕಳಿ ಸಂಘದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಖ್ಯಾತ ಸಾಹಿತಿ ಪ್ರೊ.ಸಿದ್ದರಾಜು ಪೂಜಾರಿ ಮಾತನಾಡಿ, ಮಹಾಪುರುಷರು ಹಾಗೂ ಜನಸಾಮಾನ್ಯರಿಂದ ದೇಶದ ಮೂಲ ಸತ್ವ ಇಂದಿಗೂ ಜೀವಂತವಾಗಿದೆ. ಬೀಳೂರು ಗುರುಬಸವ ಮಹಾಸ್ವಾಮಿಗಳು ಲೌಕಿಕ ಮತ್ತು ಅಲೌಕಿಕ ಅಖಂಡವಾಗಿಸಿಕೊಂಡು, ಪಾರಂರಿಕ ಸಾತ್ವಿಕ ಸತ್ವ ಸಾರಿದವರು. ಅವರು ಸಾಮಾಜಿಕ ಬದ್ದತೆಯಿಂದ ಶೈಕ್ಷಣಿಕ ಹರಿಕಾರರಾಗಿದ್ದರು. ಈ ಸಂಸ್ಥೆಯಲ್ಲಿ ನೈತಿಕ ಪ್ರಜ್ಞೆ ಇದೆ, ಈ ನೇಲದ ಸಂಸ್ಕೃತಿ, ಸಂಸ್ಕಾರ ಇದೆ, ಬೀಳೂರ ಶ್ರೀಗಳ ಸಾರ್ವಕಾಲಿಕ ಮೌಲ್ಯಗಳನ್ನು ಪರಿಪಾಲಿಸಿದ ಪರಿಣಾಮ ಸಂಘ ಬಾನೇತ್ತರಕ್ಕೆ ಬೆಳಿದಿದೆ ಎಂದರು.
ಟೀಕಿನ ಮಠದ ಮಲ್ಲಿಕಾರ್ಜುನ ದೇವರು ಹಾಗೂ ಅಡ್ನೂರಿನ ಕಲ್ಲಿನಾಥ ಶಾಸ್ತ್ರಿಗಳು ಮಾತನಾಡಿ, ಭಾರತದ ದಕ್ಷಿಣದಿಂದ ಉತ್ತರಕ್ಕೂ ತನ್ನ ಸಮಾಜಿಕ ಶೈಕ್ಷಣಿಕ ಸೇವೆಯನ್ನು ವಿಸ್ತಾರಗೊಳಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಆಢಳಿತಾಽಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿ, ೫ ಜನ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆ ಇಂದು ೫೩ ಸಾವಿರ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ನೀಡುತ್ತಿದೆ. ಮುಂದಿನ ಜನಾಂಗಕ್ಕೆ ಇತಿಹಾಸದ ಪರಿಚಯ ಅಗತ್ಯವಿದ್ದು, ವರ್ತಮಾನದ ಬೆಳವಣಿಗೆಗೆ ಪೂರ್ವ ಪರಂಪರೆಯ ಜ್ಞಾನದ ಅರಿವು ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಬೀಳೂರು ಶ್ರೀಗಳ ಜೀವನ ವೃತ್ತಾಂತ ಗ್ರಂಥವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು, ಉತ್ಸವ ಸಮಿತಿ ಅಧ್ಯಕ್ಷ ಬಿ.ಆರ್.ಬೋಳಿಶೆಟ್ಟಿ ವಂದಿಸಿದರು, ಗೌರಮ್ಮ ಕೆಂಗಲಗುತ್ತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net