

ಬ್ಯಾಡಗಿ: ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಜೀವನ ಪ್ರಸ್ತುತ ಸಮಾಜಕ್ಕೆ ಆದರ್ಶಮಯವಾಗಿದ್ದು, ಭಕ್ತಿ ಹಾಗೂ ಶ್ರದ್ಧೆಯಿಂದ ಶ್ರೀಶೈಲ ಮಲ್ಲಿಕಾರ್ಜುನನನ್ನು ಒಲಿಸಿಕೊಂಡಿರುವ ಚರಿತ್ರೆ ಪೌರಾಣಿಕ ಗ್ರಂಥದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಭಾನುವಾರ ಜರುಗಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಅಂಗವಾಗಿ ಮಲ್ಲಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಮನುಷ್ಯ ಸ್ವಾರ್ಥ ಹಾಗೂ ದ್ವೇಷ, ಅಸೂಯೆಗಳಿಂದ ಜೀವನ ನಡೆಸುತ್ತ ಮೂಲ ನೆಮ್ಮದಿ ಕೆಡಿಸಿಕೊಂಡಿದ್ದಾನೆ. ಹಿಂದಿನ ಶರಣರು ಯಾವುದೇ ಒಂದು ಸಮಾಜ ಗಮನದಲ್ಲಿಟ್ಟುಕೊಂಡು ಸಾಧನೆ ಮಾಡಿಲ್ಲ, ಅವರು ಒಂದು ಸಮಾಜಕ್ಕೆ ಮಾತ್ರ ಮೀಸಲಾದ ವ್ಯಕ್ತಿಗಳಲ್ಲ. ಅವರು ಒಟ್ಟಾರೆ ಸಮಾಜದಲ್ಲಿ ಬೇರೂರಿದ್ದ ಕಂದಾಚಾರ, ಮೂಢ ನಂಬಿಕೆಗಳ ವಿರುದ್ಧ ಹೋರಾಡಿ, ಸಾಮಾಜಿಕ ವ್ಯವಸ್ಥೆಯನ್ನು ತಿದ್ದಲು ಶ್ರಮಿಸಿದರು ಎಂದರು.
ತಹಸೀಲ್ದಾರ್ ಶರಣಮ್ಮ ಕಾರಿ ಮಾತನಾಡಿ, ಕರೊನಾ ವೈರಸ್ ನಿಯಂತ್ರಿಸಲು ಪ್ರತಿಯೊಬ್ಬರೂ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
ಪುರಸಭೆ ಸದಸ್ಯ ವಿನಯ ಹಿರೇಮಠ, ಬಿಜೆಪಿ ತಾಲೂಕಾಧ್ಯಕ್ಷ ಸುರೇಶ ಆಸಾದಿ, ಎಪಿಎಂಸಿ ಮಾಜಿ ಅಧ್ಯಕ್ಷ ರವೀಂದ್ರ ಪಟ್ಟಣಶೆಟ್ಟಿ, ಕಾರ್ಯಕರ್ತರಾದ ಸಂಜೀವ ಮಡಿವಾಳರ, ವಿಷ್ಣುಕಾಂತ ಬೆನ್ನೂರು, ವೀರೇಂದ್ರ ಶೆಟ್ಟರ್, ಗುಂಡಪ್ಪ ಹುಬ್ಬಳ್ಳಿ ಇತರರಿದ್ದರು.