

ಬಾಗಲಕೋಟೆ: ಅಸ್ಪೃಶ್ಯತೆ ತುತ್ತಾಗಿರುವ ಜನಾಂಗಗಳಿಗೆ ಒಳ ಮೀಸಲಾತಿ ಮೂಲಕ ಸಾಮಾಜಿಕ ನ್ಯಾಯ ನೀಡುವ ವಿಷಯದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಪರಿವಾರ ಬದ್ಧವಾಗಿದೆ. ಯಾರೋ ಒಬ್ಬರು ಏನಾದರು ಹೇಳಿದರು ಯಾರ ನಂಬಬಾರದು. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷವು ಬಲಿಷ್ಠ ಸಮಾಜಗಳಿಗೆ ಮೀಸಲಾತಿ ನೀಡಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾದಿಗ ಮುನ್ನಡೆ ಆತ್ಮ ಗೌರವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರು ತಮ್ಮ ಜೀವನ ಕೊನೆ ಸಂದರ್ಭದಲ್ಲಿ ದಲಿತರು ಕಾಂಗ್ರೆಸ್ ಪಕ್ಷದ ಸದಸ್ಯರಾಗಬಾರದು. ಅದು ಬೆಂಕಿ ಇದ್ದಂತೆ ಹೇಳಿದರು. ೭೦ ವರ್ಷಗಳಿಂದ ಮೂಲ ಅಸ್ಪೃಶ್ಯರು ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿತು. ಆದರೇ ಯಾವ ಕೊಡುಗೆ ನೀಡಲಿಲ್ಲ. ಇನ್ನು ಅರ್ಥವಾಗುತ್ತಿಲ್ಲ ಎಂದರೇ ಬೇಸರವಾಗುತ್ತದೆ. ಸ್ವಾಭಿಮಾನಿಗಳಾಗಿ ಚಿಂತನೆ ನಡೆಸಬೇಕು. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬಾರದು. ಹಿಂದುತ್ವ ಹಾಗೂ ದೇಶದ ಪರವಾಗಿ ಇರುವ ಪಕ್ಷವನ್ನು ಬೆಂಬಲಿಸಬೇಕು ಎಂದರು.
ನಮ್ಮ ತಂದೆ, ಅಜ್ಜ, ಮುತ್ತಜ್ಜ ಕಾಂಗ್ರೆಸ್‌ಗೆ ಮತ ಹಾಕಿ ಹುಚ್ಚರಾಗಿದ್ದಾರೆ. ನಾವು ಅದನ್ನು ಮುಂದುವರೆಸಬಾರದು. ಕಾಂಗ್ರೆಸ್‌ನ ಉಚಿತ ಅಕ್ಕಿ, ಬ್ಯಾಳಿ, ಮೌಂಸಕ್ಕೆ ಕೈ ಚಾಚದೇ ಸ್ವಾಭಿಮಾನಿ ಬದುಕಿಗೆ ಮೀಸಲಾತಿ ಪಡೆದುಕೊಳ್ಳುವತ್ತ ಚಿಂತನೆ ನಡೆಸಬೇಕು. ಮೀಸಲಾತಿ ಇಂದು, ನಿನ್ನೆಯದಲ್ಲ. ೧೨ ಶತಮಾನದಿಂದ ಬಂದ ಕ್ರಾಂತಿಕಾರಿ ಬೆಳವಣಿಗೆ. ದೇಶದ ಸ್ವಾತಂತ್ರ‍್ಯಕ್ಕಾಗಿ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದಂತೆ ಸಾಮಾಜಿಕ ನ್ಯಾಯಕ್ಕೆ ಮೀಸಲಾತಿ ಅಗತ್ಯ ಬಗ್ಗೆ ಅರಿತು ಬಲಿದಾನವಾದರು ಹೋರಾಟ ನಿಲ್ಲಿಸಬಾರದು. ತುಳಿತಕ್ಕೆ ಒಳಗಾದವರ ಧ್ವನಿಯಾಗಿ ನಿಲ್ಲಬೇಕು ಎಂದು ತಿಳಿಸಿದರು.
೧೯೫೦ ರಲ್ಲಿ ಮೀಸಲಾತಿ ಜಾರಿಗೊಳಿಸಲಾಯಿತು. ಡಾ.ಅಂಬೇಡ್ಕರ್ ಅವರು ಎಸ್ಸಿ ೬, ಎಸ್ಟಿ ೬ ಜಾತಿಗಳಿಗೆ ಮಾತ್ರ ಮೀಸಲಾತಿ ಕಲ್ಪಿಸಿದ್ದರು. ಆದರೇ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಎಸ್ಸಿ ವಿಭಾಗದಲ್ಲಿ ೧೦೧, ಎಸ್ಟಿ ವಿಭಾಗದಲ್ಲಿ ೫೬ ಜಾತಿಗಳಿಗೆ ಅದರಲ್ಲೂ ಬಲಿಷ್ಠ ಇರುವ ಜಾತಿಗಳಿಗೆ ಮೀಸಲಾತಿ ಕಲ್ಪಿಸಿತು. ಇದರಿಂದ ಮೂಲ ದಲಿತರು ಅವಕಾಶಗಳಿಂದ ವಂಚಿತರಾದರು. ಒಳ ಮೀಸಲಾತಿ ಹೋರಾಟ ಆಂದ್ರಪ್ರದೇಶದ ಕಡಪದಲ್ಲಿ ಆರಂಭವಾಯಿತು. ೩೦ ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ. ನ್ಯಾ.ಸದಾಶಿವ ಆಯೋಗವನ್ನು ಎಸ್.ಎಂ.ಕೃಷ್ಣಾ ಸರ್ಕಾರ ರಚಿಸಿತು. ಒಂದು ರೂ. ಅನುದಾನ ನೀಡಲಿಲ್ಲ. ೨೦೦೮ ರಲ್ಲಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ೧೧ ಕೋಟಿ ರೂ. ನೀಡಿತು. ನಂತರ ಸದಾನಂದ ಗೌಡ ಸಿಎಂ ಇದ್ದಾಗ ವರದಿ ಸ್ವೀಕರಿಸಲಾಯಿತು. ೨೦೧೩ ರಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸದಾಶಿವ ಆಯೋಗ ವರದಿ ಅನುಷ್ಠಾನ ಕುರಿತು ಪ್ರಸ್ತಾಪ ಮಾಡಿತು. ಆದರೇ ೨೦೧೮ ವರೆಗೂ ಜಾರಿ ಮಾಡಲಿಲ್ಲ. ಸಿದ್ದರಾಮಯ್ಯ ಸಿಎಂ ಇದ್ದಾಗ ಈ ಬಗ್ಗೆ ಚಕಾರ್ ಎತ್ತಲ್ಲ. ಸೋತಾಗ ಪ್ರಸ್ತಾಪ ಮಾಡುತ್ತಾರೆ. ಒಂದು ಪಕ್ಷವನ್ನು ಅಧಿಕಾರಕ್ಕೆ ತರುವ ಶಕ್ತಿ ದಲಿತ ಎಡಗೈ ಸಮುದಾಯಕ್ಕೆ ಇದೆ. ಇದನ್ನು ಅರಿತು ಮುನ್ನಡೆಯಬೇಕಿದೆ ಎಂದು ಹೇಳಿದರು.
ಸೋತ ತಕ್ಷಣ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ, ಎಚ್.ಆಂಜನೇಯ ಅವರಿಗೆ ಸಮಾಜ ನೆನಪಾಗುತ್ತದೆ. ಗೆದ್ದಾಗ ತುಟಿಕ್ ಪಿಟಿಕ್ ಎನ್ನಲ್ಲ. ಹೀಗಿರುವಾಗ ಅವರ ಸುಳ್ಳು, ಡೋಂಗಿ ಭಾಷಣಕ್ಕೆ ತಾವುಗಳು ತೆಲೆ ಭಾಗುವುದು ಏಕೆ? ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಹಾಗೂ ಪರಿವಾರಕ್ಕೆ ಏಷ್ಟು ಧನ್ಯವಾದ ಹೇಳಿದರು ಸಾಲದು. ಒಳ ಮೀಸಲಾತಿ ಹಾಗೂ ಮೀಸಲಾತಿ ಪ್ರಮಾಣ ಹೆಚ್ಚಳ ವಿಷಯದಲ್ಲಿ ಅವರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಚಿತ್ರದುರ್ಗ ಮಾದರ ಚನ್ನಯ್ಯ ಗುರುಪೀಠದ ಬಸವ ಮೂರ್ತಿ ಮಾದಾರ ಚನಯ್ಯ ಸ್ವಾಮೀಜಿ, ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಮುಖಂಡರಾದ ಶಿವಾನಂದ ಟವಳಿ, ಯಲ್ಲಪ್ಪ ಯಂಡಿಗೇರಿ, ಸತೀಶ ಮಾದರ, ವೈ.ಡಿ.ಆಲೂರ, ಶೇಖರ ತೋಳಮಟ್ಟಿ ಇತರರು ಇದ್ದರು.