

ಬಾಗಲಕೋಟೆ: ಸ್ಪರ್ಧಾತ್ಮಕ ಯುಗದಲ್ಲಿರುವ ವಿದ್ಯಾರ್ಥಿಗಳು ಗ್ರಂಥಾಲಯ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ನಿರಂತರ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ತಮ್ಮ ಸಾಧನೆಗೆ ಪರಿಶ್ರಮದ ಓದು ಮುಖ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರು ಹೇಳಿದರು.
ನವನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೨೦೨೩-೨೪ ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಜಿಲ್ಲಾ ಕಲಾವಿದರ, ಸಾಹಿತಿಗಳ, ಪತ್ರಕರ್ತರ ಮತ್ತು ಸಂಘಟಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಎಲ್ಲಿ ದುಡುಮೆ ಇರುತ್ತೆ ಅಲ್ಲಿ ಸತ್ಯ ಇರುತ್ತೆ, ಎಲ್ಲಿ ಸತ್ಯ ಇರುತ್ತೆ ಅಲ್ಲಿ ಸಾಧನೆ ಮಾಡುವ ಸಾರ್ಥಕತೆ ಛಲ ಬೆಳೆೆಯುತ್ತದೆ. ಕಾಲಕಾಲಕ್ಕೆ ಮಳೆಬೆಳೆ ಬರಲು ನಮ್ಮ ನೆಲೆದ ಜಾನಪದರು ಕಟ್ಟಿರುವ ಪದಗಳು ಮುಖ್ಯ. ಅದರಲ್ಲಿರುವ ಮೌಲ್ಯಗಳು ಇಂದಿನ ಯುವಕರಿಗೆ ಅಳವಡಿಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನದ ಸಾಮರ್ಥ್ಯ ಅರಿತರೆ ಪ್ರತಿಭೆಗೆ ಬಡತನವಿಲ್ಲ, ಮೋಬೈಲಿಗೆ ರೆಸ್ಟ್ ಕೊಟ್ಟು, ಮೇದುಳಿಗೆ ಕೆಲಸ ಕೊಡುವ ಕಾರ್ಯ ಮಾಡಬೇಕಾಗಿದೆ. ವಿದ್ಯಾರ್ಥಿಗಳು ಸತತವಾದ ಅಧ್ಯಯನದಲ್ಲಿ ತೊಡಗಿಕೊಂಡು ಸಮಾಜದಲ್ಲಿ ಆದರ್ಶದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಕಲಕತ್ತಾ ಐಐಟಿ ಪ್ರತಿಭಾವಂತ ವಿದ್ಯಾರ್ಥಿ ವಿಕ್ರಮ್ ಚಂದ್ರಕಾಂತ ಜೋಶಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ಮೊದಲು ತಾವೇ ಅರಿತುಕೊಂಡು, ಓದುವ ಉತ್ತಮ ಪರಿಸರ ಸೃಷ್ಟಿಸಿಕೊಳ್ಳಬೇಕು. ಅಂತರಜಾಲದಲ್ಲಿ ದೊರೆಯುವ ಓದಿನ ಪರಿಕರಗಳನ್ನು ಸರಿಯಾಗಿ ಸಂಗ್ರಹಿಸಿಕೊಂಡು, ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಕಸಾಪ ಮತ್ತು ಕಜಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ನಮ್ಮ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರದಿಂದ ಅವರಲ್ಲಿ ಓದುವ ಅಭಿರುಚಿ ಹೆಚ್ಚಾಗಿ, ಸಮಾಜದಲ್ಲಿ ಸಾಧನೆ ಮಾಡುವ ಹಂಬಲ ಮತ್ತು ಆಸಕ್ತಿ ಬೆಳೆಯುತ್ತದೆ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಆನಂದ ದಲಬಂಜನ ಅವರು ಮಾತನಾಡಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವದರಿಂದ ಅವರ ಮುಂದಿನ ವ್ಯಾಸಂಗಕ್ಕೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಸಾಹಿತಿಗಳಾದ ಮಲ್ಲಿಕಾರ್ಜುನ ಶೆಲ್ಲಿಕೇರಿ ಮಾತನಾಡಿದರು. ಕಸಾಪ ಗೌರವ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಕಜಾಪ ಪ್ರಧಾನ ಕಾರ್ಯದರ್ಶಿ ಸಿ.ಎನ್.ಬಾಳಕ್ಕನವರ, ಕೋಶಾಧ್ಯಕ್ಷ ಆರ್.ಸಿ.ಚಿತ್ತವಾಡಿಗಿ, ಕಸಾಪ ತಾಲೂಕ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಡಾ.ಎಚ್.ಎಸ್.ಘಂಟಿ, ಮಲ್ಲಿಕಾರ್ಜುನ ಸಜ್ಜನ ಇತರರು ಇದ್ದರು.