

ಸುಭಾಸ ಧೂಪದಹೊಂಡ ಕಾರವಾರ
ಗೋಕರ್ಣ ಸಾಣಿಕಟ್ಟಾ ನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರಿ ಸಂಘವು ಉಪ್ಪಿನ ಪೂರೈಕೆಯನ್ನು ಉತ್ತರ ಕನ್ನಡ ಜಿಲ್ಲೆಗೆ ಸೀಮಿತಗೊಳಿಸಿದೆ. ನೂರಾರು ವರ್ಷಗಳ ಸಂಘದ ಇತಿಹಾಸಲ್ಲಿ ಇದೇ ಮೊದಲ ಬಾರಿಗೆ ಉಪ್ಪಿನ ಭಾರಿ ಕೊರತೆ ಉಂಟಾಗಿದ್ದರಿಂದ ಈ ನಿರ್ಣಯ ಕೈಗೊಳ್ಳಲಾಗಿದೆ.
ಗೋಕರ್ಣ ಸಾಣಿಕಟ್ಟಾದಲ್ಲಿ ನಾಗರಬೈಲ್ ಸೊಸೈಟಿಯಡಿ 374 ಭೂ ಮಾಲೀಕರ 565 ಎಕರೆ ಜಮೀನಿದ್ದು, ಸಮುದ್ರದ ನೀರು ಬಳಸಿ ಪ್ರತಿ ವರ್ಷ 10ರಿಂದ 12 ಸಾವಿರ ಟನ್ ಉಪ್ಪು ಉತ್ಪಾದನೆ ಮಾಡಲಾಗುತ್ತದೆ. ಅದರಲ್ಲಿ ಐದಾರು ಸಾವಿರ ಟನ್ಗಳಷ್ಟು ಉಪ್ಪನ್ನು ಶಿರಾಳಕೊಪ್ಪ, ಶಿಕಾರಿಪುರ, ಸಾಗರ, ಸೊರಬ, ಧಾರವಾಡ, ಕಲಘಟಗಿ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಹಾಗೂ ಸಂಪೂರ್ಣ ಗೋವಾ ಭಾಗಕ್ಕೆ ಪೂರೈಕೆ ಮಾಡಲಾಗುತ್ತಿತ್ತು. ಉಳಿದ ಉಪ್ಪನ್ನು ಉ.ಕ. ಜಿಲ್ಲಾದ್ಯಂತ ವಿತರಿಸಲಾಗುತ್ತಿತ್ತು.
ಪ್ರತಿ ವರ್ಷ ಫೆಬ್ರವರಿಯಿಂದ ಮೇವರೆಗೆ 4 ತಿಂಗಳು ಮಾತ್ರ ಉಪ್ಪು ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ. ಆದರೆ, ಈ ಬಾರಿ ಅದೇ ಕಾಲದಲ್ಲಿ ನಿರಂತರ ಮಳೆಯಾಗಿದ್ದರಿಂದ 3 ಸಾವಿರ ಟನ್ ಮಾತ್ರ ಉಪ್ಪು ಉತ್ಪಾದನೆಯಾಗಿದೆ. ಇದರಿಂದ ಪೂರೈಕೆಯನ್ನು ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅಲ್ಲದೆ, ಸೊಸೈಟಿಯಿಂದ ಈ ಹಿಂದೆ ನಿರಂತರ ವ್ಯವಹಾರ ಮಾಡಿದವರಿಗೆ ಮಾತ್ರ ಬೇಡಿಕೆ ಶೇ. 30ರಷ್ಟು ಉಪ್ಪನ್ನು ವಿತರಣೆ ಮಾಡುವ ನಿಯಮವನ್ನು ಸೊಸೈಟಿ ರೂಪಿಸಿದೆ.
ನೈಸರ್ಗಿಕ ಉಪ್ಪು: ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್ಗಳ ಬಿಳಿ ಉಪ್ಪು ಲಭ್ಯವಿದೆ. ಆದರೆ, ಸಾಣಿಕಟ್ಟಾದಲ್ಲಿ ಅತ್ಯಂತ ನೈಸರ್ಗಿಕವಾಗಿ ತಯಾರಾಗುವ ಹರಳು ಉಪ್ಪಿಗೆ ಎಲ್ಲೆಡೆ ಬೇಡಿಕೆ ಇದೆ. ಸಮುದ್ರದ ನೀರನ್ನು 3.5 ಕಿ.ಮೀ. ದೂರ ವಿವಿಧ ಹಂತಗಳಲ್ಲಿ ಹರಿಸಿ ನಂತರ 70 ಎಕರೆ ಪ್ರದೇಶದ ಉಪ್ಪಿನ ಆಗರದಲ್ಲಿ ಅದನ್ನು ಬಿಸಿಲಿಗೆ ಒಡ್ಡಿ ಘನೀಕರಿಸಲಾಗುತ್ತದೆ. ಅಯೋಡಿನ್ ಬಿಟ್ಟರೆ ಬೇರೆ ಯಾವುದೇ ವಸ್ತುವನ್ನು ಇದಕ್ಕೆ ಸೇರಿಸುವುದಿಲ್ಲ. ಪ್ರತಿ 1 ಕೆಜಿ ಉಪ್ಪಿನ ಪ್ಯಾಕೆಟ್ 12 ರೂ.ಗೆ ದೊರೆಯುತ್ತದೆ. ಇದು ಉತ್ತರ ಕನ್ನಡ ಸೇರಿ ಸುತ್ತಲಿನ ಜಿಲ್ಲೆಗಳ ಬಡವರ ಊಟದ ರುಚಿ ಹೆಚ್ಚಿಸುವ ಮೂಲ ವಸ್ತುವಾಗಿದೆ.
‘17 ರಿಂದ 29 ಡಿಗ್ರಿ ಉಷ್ಣಾಂಶದಲ್ಲಿ ಸಮುದ್ರದ ಉಪ್ಪು ನೀರನ್ನು ಘನೀಕರಿಸಿ ಹರಳು ಉಪ್ಪು ತಯಾರಿಸಲಾಗುತ್ತದೆ. ಉಷ್ಣಾಂಶ ಸ್ವಲ್ಪ ಹೆಚ್ಚಿದರೂ ಉಪ್ಪಿನಿಂದ ಬೇರೆ ಕಾಯಿಲೆಗಳು ಬರುವ ಸಾಧ್ಯತೆ ಇದೆ. ನಮ್ಮದೇ ಸ್ವಂತ ಪ್ರಯೋಗಾಲಯವಿದೆ. ತಂತ್ರಜ್ಞರಿದ್ದಾರೆ. ನಾವು ಅದೇ ರೀತಿ ಅತ್ಯಂತ ಕಾಳಜಿಯಿಂದ ಉಪ್ಪು ತಯಾರಿಸುತ್ತೇವೆ. ಪಾರಂಪರಿಕ ಜ್ಞಾನ ಹೊಂದಿರುವ ತಲಾ 150 ಪುರುಷ ಹಾಗೂ ಮಹಿಳಾ ಕಾರ್ವಿುಕರು ನಮ್ಮಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎನ್ನುತ್ತಾರೆ ನಾಗರಬೈಲ್ ಸೊಸೈಟಿ ಅಧ್ಯಕ್ಷ ಅರುಣ ನಾಡಕರ್ಣಿ.
ಸುತ್ತಲೂ ಸಮುದ್ರ ಉಪ್ಪಿಗೆ ಬರ: ಅಡುಗೆಗೆ ಮಾತ್ರವಲ್ಲದೆ ಔಷಧಕ್ಕೂ ಸಾಣಿಕಟ್ಟಾ ಉಪ್ಪನ್ನು ಬಳಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲ ಕಿರಾಣಿ ಅಂಗಡಿಗಳಲ್ಲೂ ಕಂದು ಬಣ್ಣದ ಸಾಣಿಕಟ್ಟಾ ಉಪ್ಪು ಸಿಗುತ್ತಿತ್ತು. ಈಗ ಆ ಪ್ಯಾಕೆಟ್ ಬೇಡಿಕೆಯಷ್ಟು ಸಿಗದ ಕಾರಣ ಅಂಗಡಿಗಳಲ್ಲಿ ದುಪ್ಪಟ್ಟು ಬೆಲೆ ಹೇಳಲಾಗುತ್ತಿದೆ. ಜನ ಅನಿವಾರ್ಯವಾಗಿ ಬಿಳಿ ಉಪ್ಪು ಬಳಸುತ್ತಿದ್ದಾರೆ. ಸುತ್ತ ಸಮುದ್ರವಿದ್ದರೂ ಉತ್ತರ ಕನ್ನಡದ ಕರಾವಳಿಯಲ್ಲೇ ಉಪ್ಪಿಗೆ ಬರ ಉಂಟಾಗಿರುವುದು ವಿಪರ್ಯಾಸ. ಸಮುದ್ರದ ಪಕ್ಕ ಎಲ್ಲೆಂದರಲ್ಲಿ ಉಪ್ಪು ತಯಾರಿಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಈ ಹಿಂದೆ ಇದ್ದ 10ಕ್ಕೂ ಹೆಚ್ಚು ನೈಸರ್ಗಿಕ ಉಪ್ಪು ತಯಾರಿಕೆ ಕೇಂದ್ರಗಳು ಈಗ ಇಲ್ಲ. ಇದರಿಂದ ಜನರು ಸಾಣಿಕಟ್ಟಾ ಉಪ್ಪನ್ನು ನೆಚ್ಚಿಕೊಂಡಿದ್ದಾರೆ.
ಇತ್ತೀಚೆಗೆ ನೈಸರ್ಗಿಕ ಉತ್ಪನ್ನಗಳ ಬಗ್ಗೆ ಜನರ ಆಸಕ್ತಿ ಹೆಚ್ಚಿದ್ದರಿಂದ ಹೊರ ರಾಜ್ಯಗಳಿಂದಲೂ ಭಾರಿ ಬೇಡಿಕೆ ಬರುತ್ತಿದೆ. ಆದರೆ, ಈ ಬಾರಿ ಉಪ್ಪಿನ ಕೊರತೆ ಉಂಟಾಗಿದೆ. ಜಿಲ್ಲೆಯ ಜನರ ದಿನಬಳಕೆಗೆ ಉಪ್ಪಿನ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ನಾವು ಜಿಲ್ಲೆಯಲ್ಲಿ ಸೀಮಿತವಾಗಿ ಮಾತ್ರ ಉಪ್ಪು ಮಾರಾಟ ಮಾಡಲು ನಿರ್ಣಯ ತೆಗೆದುಕೊಂಡಿದ್ದೇವೆ. ನಮ್ಮಲ್ಲಿ ಇನ್ನೂ ಒಂದೂವರೆ ಸಾವಿರ ಟನ್ ಉಪ್ಪು ಸಂಗ್ರಹವಿದೆ. ಜನ ಆತಂಕ ಪಡುವ ಅವಶ್ಯಕತೆ ಇಲ್ಲ. ಕೆಲ ತಿಂಗಳಲ್ಲಿ ಹೊಸ ಉಪ್ಪಿನ ಉತ್ಪಾದನೆ ಶುರುವಾಗಲಿದೆ. ಅರುಣ ನಾಡಕರ್ಣಿನಾಗರಬೈಲ್ ಉಪ್ಪಿನ ಮಾಲೀಕರ ಸಹಕಾರಿ ಸಂಘದ ಅಧ್ಯಕ್ಷ