ಸಹೋದರಿ ಸಂಜೀವಿನಿ ಸೂಪರ್ ಮಾರ್ಕೆಟ್ ಉದ್ಘಾಟನೆ

4412da6d-1295-4731-8186-f77961e8bbaf
Published on

ಬಾಗಲಕೋಟೆ: ನವನಗರದ ತಾಲೂಕಾ ಪಂಚಾಯತ ಆವರಣದಲ್ಲಿ ಪ್ರಾರಂಭಿಸಲಾದ ಸಹೋದರಿ ಸಂಜೀವಿನಿ ಸೂಪರ್ ಮಾರ್ಕೆಟ್‍ಗೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಿದರು.

ಜಿಲ್ಲಾ ಪಂಚಾಯತ ಎನ್.ಆರ್.ಎಲ್.ಎಂ ಯೋಜನೆಯಡಿ ಸ್ವ-ಸಹಾಯ ಸಂಘಗಳು ಪ್ರಾರಂಭಿಸಲಾದ ಸಹೋದರಿ ಸಂಜೀವಿನಿ ಸೂಪರ್ ಮಾರ್ಕೆಟ್‍ಗೆ ಚಾಲನೆ ನೀಡಿ ಮಾಡನಾಡಿದ ಅವರು ಸಮುದಾಯ ಆಧಾರಿತ ಸಂಸ್ಥೆಗಳ ಮೂಲಕ ಲಾಭದಾಯಕ ವೇತನ ಮತ್ತು ಸ್ವ-ಉದ್ಯೋಗ ಅವಕಾಶಗಳನ್ನು ಒದಗಿಸುವ ಹಾಗೂ ಜೀವನೋಪಾಯಗಳನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಬಡತನವನ್ನು ಹೋಗಲಾಡಿಸಲು ಡೇ-ಎನ್.ಆರ್.ಎಲ್.ಎಂ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯ ಸದುಪಯೋಗವನ್ನು ಸ್ವ-ಸಹಾಯ ಸಂಘಗಳು ಮುಂದೆ ಬರಬೇಕು ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಎನ್.ಆರ್.ಎಲ್.ಎಂ ಯೋಜನೆಯಡಿ ಸ್ವ-ಸಹಾಯ ಸಂಘಗಳ ಸದಸ್ಯರು ಸಮುದಾಯ ಬಂಡವಾಳ ನಿಧಿ ಹಾಗೂ ಬ್ಯಾಂಕ ಲಿಂಕೇಜ್ ಮೂಲಕ ಸಾಲ ಸೌಲಭ್ಯ ಹಾಗೂ ಸ್ವ-ಉದ್ಯೋಗ ಕೌಶಲ್ಯ ತರಬೇತಿ ಪಡೆದುಕೊಂಡು ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಸದಸ್ಯರು ತಯಾರಿಸುತ್ತಿರುವ ಉತ್ಪನ್ನಗಳಿಗೆ ಅಕ್ಕ, ಅಸ್ಮಿತೆ ಹೆಸರಿನ ಬ್ರ್ಯಾಂಡ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಲು ಒಂದು ವೇದಿಕೆ ಕಲ್ಪಿಸಿ ಕೊಡುವ ಉದ್ದೇಶದಿಂದ ಮತ್ತು ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸಹೋದರಿ ಸಂಜಿವೀನಿ ಸೂಪರ್ ಮಾರ್ಕೆಟ್ ಕಲ್ಪಿಸಲಾಗುತ್ತಿದೆ ಎಂದರು.

ಸೂಪರ್ ಮಾರ್ಕೆಟ್‍ನ್ನು ಗ್ರಾಮ ಪಂಚಾಯತ ಒಕ್ಕೂಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್.ಆರ್.ಎಲ್.ಎಂ ಸ್ವ-ಸಹಾಯ ಗುಂಪುಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಇದೇ ರೀತಿ ಜಿಲ್ಲೆಯ ಜಮಖಂಡಿ ನಗರ, ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಮತ್ತು ಬೀಳಗಿ ತಾಲೂಕಿನ ಬಾಡಗಿ ಪಟ್ಟಣದಲ್ಲಿ ಸಂಜೀವಿನಿ ಮಾರ್ಟ, ಕಿಯೋಸ್ಕಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ, ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕಾ ಅಧ್ಯಕ್ಷ ಎಸ್.ಎನ್.ರಾಂಪೂರ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್. ಬಸರಿಗಿಡದ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರು ಸಚಿವರಿಗೆ, ಶಾಸಕರಿಗೆ ಆರತಿ ಮಾಡುವ ಮೂಲಕ ಸೂಪರ್ ಮಾರ್ಕೆಟಗೆ ಸ್ವಾಗತ ಕೋರಿದರು. ನಂತರ ಮಾರ್ಕೆಟ್‍ನಲ್ಲಿ ಇಡಲಾದ ವಿವಿಧ ಉತ್ಪನ್ನಗಳನ್ನು ವೀಕ್ಷಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net