

ಬಾಗಲಕೋಟೆ: ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡ ಸಹಿ ಸಂಗ್ರಹ ಕಾರ್ಯಕ್ಕೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಚಾಲನೆ ನೀಡಿದರು.
ವಿದ್ಯಾಗಿರಿಯ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ್ ಸಹಯೋಗದಲ್ಲಿ ಗುರುವಾರ ಮತದಾನ ಜಾಗೃತಿಗಾಗಿ ಹಮ್ಮಿಕೊಂಡ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತçದ ಸೇರಿದಂತೆ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಶಶಿಧರ ಕುರೇರ ಮತದಾನ ಜಾಗೃತಿಯ ಸಂದೇಶಗಳನ್ನು ಬರೆಯುವ ಮೂಲಕ ಸಹಿ ಮಾಡಿದರು. ನಂತರ ಸೆಲ್ಪಿ ಸ್ಟ್ಯಾಂಡ್‌ನಲ್ಲಿ ನಿಂತುಕೊಂಡು ಕಿರು ಬೆರಳು ತೋರಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಬಾರಿ ಮತದಾನ ಪ್ರಮಾಣ ಚೆನ್ನಾಗಿ ಆಗಿದ್ದು, ಈ ಇಷ್ಟೊಂದು ಚಟುವಟಿಕೆಗಳ ಮೂಲಕ ಜನರನ್ನು ಮುಟ್ಟುವಂತೆ ಮಾಡಿದ್ದೀರಿ. ನೀವೆಲ್ಲರೂ ಮೇ ೭ ರಂದು ಜರುಗುವ ಪ್ರಜಾಪ್ರಭುತ್ವದ ಹಬ್ಬಕ್ಕೆ ಮತಗಟ್ಟೆಗಳನ್ನು ಸುಂದರಾಗಿ ಕಾಣುವಂತೆ ಮಾಡಲಾಗಿದೆ. ಸಖಿ, ವಿಶೇಷ ಚೇತನರ, ಯುವ, ಥೀಮ್ ಆಧಾರಿತ, ಸಾಂಪ್ರದಾಯಿಕ ವಿಷಯ ಸೇರಿದಂತೆ ನಾನಾ ರೀರಿಯ ಮತಗಟ್ಟೆಗಳನ್ನು ಶೃಂಗಾರಗೊಳಿಸಲಾಗಿದೆ. ನೀವು ಸೇರಿದಂತೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಮತಗಟ್ಟೆಗೆ ಬಂದು ತಪ್ಪದೇ ಮತ ಚಲಾಯಿಸಬೇಕು ಎಂದರು.
ಈಗ ಜಿಲ್ಲೆ, ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿರುವದರಿಂದ ಮುಂಜಾಗ್ರತವಾಗಿ ಮತಗಟ್ಟೆಗೆ ಬರುವಾಗ ನೀರು ಕುಡಿದು ಟೋಪಿ ಹಾಕಿಕೊಂಡು ಬರಬೇಕು. ಮತಗಟ್ಟೆಗಳಲ್ಲಿ ನೆರಳಿಗಾಗಿ ಶಾಮಿಯಾನ, ಕುಡಿಯಲು ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಲಾಗಿತ್ತದೆ. ತೊಂದರೆಯಾದಲ್ಲಿ ಆರೋಗ್ಯ ಸಿಬ್ಬಂದಿ ನೇಮಿಸಲಾಗುತ್ತಿದ್ದು, ಓಆರ್‌ಎಸ್ ಸಹ ನೀಡಲಾಗುತ್ತದೆ. ಇಷ್ಟೆಲ್ಲ ಸೌಲಭ್ಯಗಳು ಕೊಡಲಾಗುತ್ತಿದೆ. ಈ ವ್ಯವಸ್ಥೆ ಎಲ್ಲ ಜಿಲ್ಲಾ ಆಡಳಿತದಿಂದ ಮಾಡಲಾಗಿದ್ದು, ಇದರ ಸದುಪಯೋಗ ಮತದಾರರು ಪಡೆದುಕೊಂಡು ಮತದಾನ ಹಬ್ಬದಲ್ಲಿ ಪಾಲ್ಗೊಳ್ಳಲು ತಿಳಿಸಿದರು.
ನಂತರ ಕಾರ್ಮಿಕರಿಂದ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಪೂರ್ವದಲ್ಲಿ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಮೂಡಿಸಲು ಬೀದಿನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಕಲಾವಿದರು ಬೀದಿ ನಾಟಕದ ಮೂಲಕ ಮತದಾನದ ಮಹತ್ವ ತಿಳಿಸುವದರ ಜೊತೆಗೆ ಕಡ್ಡಾಯವಗಿ ಮತದಾನ ಮಾಡುವಂತೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಅಮರೇಶ ನಾಯಕ, ಯೋಜನಾ ನಿರ್ದೇಶಕ ಶಶಿಕಾಂತ ಶಿವಪೂರೆ, ಸಮಾಜ ಕಲ್ಯಾಣಾಧಿಕಾರಿ ನಂದಾ ಹಣಮರಟ್ಟಿ, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಪ್ರಶಾಂತ ಮಾವಿನಮರದ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.