ಸಹಕಾರಿ ಸಂಘಗಳು ಠೇವು ಬಡ್ಡಿ ಹೆಚ್ಚಿಸಲಿ

29mnd1
Published on

ವಿಜಯವಾಣಿ ಸುದ್ದಿಜಾಲ ಮುಂಡಗೋಡ: ನನ್ನ ರಾಜಕೀಯ ಜೀವನ ಆರಂಭವಾಗಿದ್ದೆ ಸಹಕಾರಿ ಕ್ಷೇತ್ರದಿಂದ ಹಾಗೆಯೇ ಭದ್ರ ಬುನಾದಿ ಕಂಡುಕೊಂಡಿದ್ದು ಕೂಡ ಸಹಕಾರಿ ಸಂಘಗಳಿಂದ ಎಂದು ಕಾರ್ವಿುಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ತಾಲೂಕಿನ ಮಳಗಿ ಗ್ರಾಮದಲ್ಲಿ ಶನಿವಾರ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ಸಂಘಗಳು ಸ್ಪರ್ಧಾತ್ಮಕ ಯೋಚನೆ ಮಾಡಬೇಕು. ಠೇವು ಬಡ್ಡಿಯನ್ನು ಹೆಚ್ಚು ಮಾಡಿ ಸಾಲದ ಬಡ್ಡಿ ದರವನ್ನು ಕಡಿಮೆ ಮಾಡಬೇಕು. ಸಂಘಗಳಿಗೆ ಉತ್ತಮ ಸಾಲಗಾರರ ಕೊರತೆ ಇದೆ. ಈಗಾಗಲೇ ಸಹಕಾರಿ ಮಂತ್ರಿಗಳು ಮತ್ತು ನಾನು ಸೇರಿ ಸಹಕಾರಿ ಕ್ಷೇತ್ರದ ಪ್ರಬಲ ಹಿಡಿತಕ್ಕಾಗಿ ಅನೇಕ ತಿದ್ದುಪಡಿ ಮಾಡಲು ಬರುವ ಅಧಿವೇಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ಮುಖ್ಯ ಕಾರ್ಯ ನಿರ್ವಾಹಕ ಸಿ.ಕೆ. ಮಧುಸೂಧನ ಮಾತನಾಡಿ, ನಮ್ಮ ಭಾಗದ ಕೈಗಡ ಸಾಲ ಕೊಳ್ಳುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೈನಳ್ಳಿಯಲ್ಲಿ ಕೋ-ಆಪ್ ಸೊಸೈಟಿ ಪ್ರಾರಂಭ ಮಾಡಿದೆವು. ನಂತರ ಸಾಲ ನೀಡಿ ಉತ್ತಮ ವಸೂಲಾತಿ ಮಾಡಿ ಮುಂಡಗೋಡ, ಪಾಳಾ ಈಗ ಮಳಗಿಯಲ್ಲಿ ಶಾಖೆಗಳನ್ನು ಪ್ರಾರಂಭ ಮಾಡಿದ್ದೇವೆ. ಜತೆಯಲ್ಲಿ ಸಮಾಜ ಸೇವೆಯನ್ನೂ ಮಾಡುತ್ತ ಬಂದಿದ್ದೇವೆ ಎಂದರು.

ಈ ವೇಳೆ ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಪಿ.ಎಸ್. ಸಂಗೂರಮಠ, ಸಿ.ಕೆ. ಪ್ರಕಾಶ, ಜಗದೀಶ ಕುರುಬರ, ಜಾನು ಮಿಸಳ, ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ಎಫ್.ಡಿ. ಗುಲ್ಯಾನವರ, ಜಗದೀಶ ವಾಲಿಶೆಟ್ಟರ, ನಂದೀಶ ಹಿರೇಮಠ, ಸುಜಿತ ಸದಾನಂದ, ವಿನುತಾ ಮೋರೆ, ನಾರಾಯಣ ಉಪ್ಪುಂದ, ಸುನೀಲ ಬೈಲೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net