ಸಹಕಾರ ಸಂಘದಲ್ಲಿ ಠೇವಣಿ ಹಣ, ಚಿನ್ನಾಭರಣಕ್ಕೆ ಕನ್ನ?

10 KKP 3
Published on

ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗ್ರಾಹಕರ ಪ್ರತಿಭಟನೆ

ಕನಕಪುರ:ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ರೈತ ಸೇವಾ ಸಹಕಾರ ಸಂಘದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಈ ಹಣವನ್ನು ವಸೂಲಿ ಮಾಡಿ ಠೇವಣಿದಾರರಿಗೆ ಹಿಂದಿರುಗಿಸಬೇಕು ಎಂದು ಗ್ರಾಹಕರು ಗುರುವಾರ ಪ್ರತಿಭಟಿಸಿದರು.

ಸಹಕಾರ ಸಂಘದ ಕಚೇರಿಯ ಮುಂದೆ ಜಮೆಗೊಂಡ ಗ್ರಾಹಕರು, ತಾವು ಅಡವಿಟ್ಟ ಚಿನ್ನಾಭರಣ ಹಾಗೂ ಠೇವಣಿ ಇಟ್ಟ 2.05 ಕೋಟಿ ರೂ.ಅನ್ನು ಕೂಡಲೇ ಮರುಪಾವತಿಸಬೇಕು ಎಂದು ಆಗ್ರಹಿಸಿದರು.

ಪ್ರಗತಿಪರ ಸಂಘಟನೆ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಸಾರ್ವಜನಿಕರು, ರೈತರು, ಗ್ರಾಮೀಣ ಜನರು ಬ್ಯಾಂಕ್ ಮೇಲೆ ನಂಬಿಕೆ ಇಟ್ಟು ಹಣ ಮತ್ತು ಚಿನ್ನವನ್ನು ಠೇವಣಿ ಇಟ್ಟಿದ್ದಾರೆ. ಆದರೆ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಲೆಕ್ಕಪತ್ರವಿಲ್ಲದೆ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಠೇವಣಿಯನ್ನು ನುಂಗಿನೀರು ಕುಡಿದಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದು ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಈವರೆಗೆ ಗ್ರಾಹಕರಿಗೆ ಹಣ ಮರಳಿಸಿಲ್ಲ ಎಂದು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜನರು ಕಷ್ಟಪಟ್ಟು ದುಡಿದ ಹಣ, ಚಿನ್ನಾಭರಣ ಕಷ್ಟಕಾಲಕ್ಕೆ ಆಗಲಿ ಎಂದು ರೈತ ಸೇವಾ ಸಹಕಾರ ಸಂಘದಲ್ಲಿ ಇಟ್ಟಿದ್ದಾರೆ. ಆದರೆ ಇದನ್ನು ದುರುಪಯೋಗ ಪಡಿಸಿಕೊಂಡು ರೈತರ ಹಾಗೂ ಬಡವರಿಗೆ ವಂಚಿಸಿದ್ದಾರೆ. ಕಳೆದ 2 ವರ್ಷಗಳಿಂದ 10 ಕೆಜಿಗೂ ಹೆಚ್ಚು ಚಿನ್ನ, 2 ಕೋಟಿ ರೂ. ಅನ್ನು ವಾಪಸ್ ನೀಡಲು ಕಾಲಾವಧಿ ಕೇಳುತ್ತಿರುವುದು ವಿಪರ್ಯಾಸ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸ್ವಕ್ಷೇತ್ರದಲ್ಲೇ ಸಹಕಾರ ಸಂಘಗಳಲ್ಲಿ ಅಕ್ರಮ ವರದಿಯಾಗುತ್ತಿದೆ. ಹಣ ಕಳೆದುಕೊಂಡವರ ನೆರವಿಗೆ ಅವರು ಬರಬೇಕಿಗಿತ್ತು. ಆರೆ ಮನೋರಂಜನೆ ಹೆಸರಿನಲ್ಲಿ ಹಣ ಮಾಡುವ ಬಿಗ್‌ಬಾಸ್ ಶೋ ಸ್ಥಗಿತಗೊಂಡರೆ 24 ಗಂಟೆಯಲ್ಲಿ ಅದರ ರಕ್ಷಣೆಗೆ ಮುಂದಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಠೇವಣಿದಾರರಾದ ಮಂಚೇಗೌಡ, ರವಿ, ರಾಮು, ರೆಡ್ಡಿ, ಪುಟ್ಟಸ್ವಾಮಿಗೌಡ, ಶಿವಮಾದು, ತಿಪ್ರಯ್ಯ, ಒಡವೆ ಅಡವಿಟ್ಟಿದ್ದ ದೇವಮ್ಮ, ಲಕ್ಷ್ಮೀ, ವಿನುತಾ, ಗೌರಮ್ಮ ಹಾಗೂ ಇತರರಿದ್ದರು.

ಸಹಕಾರ ಸಂಘದಲ್ಲಿ ಆಗಿರುವ ಅವ್ಯವಹಾರ ಸರಿಪಡಿಸಲು ತಿಂಗಳ ಕೊನೆಯಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಅಧಿಕಾರಿಗಳು ಮತ್ತು ನಿರ್ದೇಶಕರ ಒಪ್ಪಿಗೆ ಪಡೆದು ಮುಂದಿನ ದಿನದಲ್ಲಿ ಶೇಕಡಾವಾರು ಹಣ ಮತ್ತು ಒಡವೆಗಳನ್ನು ಹಿಂದಿರುಗಿಸಲಾಗುವುದು.ಸುರೇಂದ್ರಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net