

ತಿ.ನರಸೀಪುರ: ತಾಲೂಕಿನ ಕುರುಬೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸೋಮವಾರ ನಡೆಯಿತು.
ಒಟ್ಟು 12 ನಿರ್ದೇಶಕರನ್ನು ಒಳಗೊಂಡಿರುವ ಸಂಘದಲ್ಲಿ ಪರಿಶಿಷ್ಟ ಪಂಗಡದ ಮೀಸಲು ಸ್ಥಾನ ಖಾಲಿಯಾಗಿದ್ದು, ಉಳಿದಂತೆ 11 ಮಂದಿ ನಿರ್ದೇಶಕರು ಚುನಾವಣೆಯಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮಹದೇವಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಎಂ.ಶಿವಕುಮಾರ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಹಸೀನಾ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಣೆಯಾಗುತ್ತಿದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ನೂತನ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ಕುರುಬೂರು, ಕೊತ್ತೇಗಾಲ, ಮಾಡ್ರಹಳ್ಳಿ, ಕನ್ನಹಳ್ಳಿ, ಕನ್ನಹಳ್ಳಿ ಮೋಳೆ, ತೊಟ್ಟವಾಡಿ ಹಾಗೂ ಸೀಹಳ್ಳಿ ಸೇರಿದಂತೆ ಇತರ ಗ್ರಾಮಗಳ ಸುಮಾರು 1170 ಷೇರುದಾರನ್ನು ಸಂಘ ಹೊಂದಿದೆ ಎಂದರು.
ಮಹಿಳೆಯರ ಅಭಿವೃದ್ಧಿಗೆ ಮಹಿಳಾ ಸ್ವಸಹಾಯ ಸಂಘಗಳಿಗೆ ಸುಮಾರು 2.80 ಕೋಟಿ ರೂ.ಸಾಲ ನೀಡಲಾಗಿದೆ. ಬೆಳೆ ಸಾಲ ಸೇರಿದಂತೆ 6.70 ಕೋಟಿ ರೂ.ನೀಡಿ ರೈತರ ಅಭಿವೃದ್ಧಿಗೆ ಸಂಘ ಸಹಕಾರ ನೀಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಷೇರುದಾರರಿಗೆ ಯಶಸ್ವಿನಿ ಯೋಜನೆ, ಹಾಗೂ ಸರ್ಕಾರದಿಂದ ಬರುವ ಎಲ್ಲ ರೀತಿಯ ಸೌಲಭ್ಯವನ್ನು ಒದಗಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಷೇರುದಾರರು ನಿಗದಿತ ಸಮಯಕ್ಕೆ ಸಾಲ ಮರುಪಾವತಿಸುವುದರಿಂದ ಸಂಘ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈಗಾಗಲೇ ಕುರುಬೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮ ಸಂಘ ಎಂದು ಪ್ರಶಸ್ತಿಗೆ ಪಡೆದಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಕೆ.ಎಂ.ಶಿವಕುಮಾರ್, ನಿರ್ದೇಶಕರಾದ ಕೆ.ಎಸ್. ನಾಗರಾಜಮೂರ್ತಿ, ಎಂ.ಶಾಂತಾ, ಎಂ.ರವಿ, ಜಯಪ್ಪ, ಮಂಜುಳಾ, ಲಲಿತಮ್ಮ, ಪುಟ್ಟಸ್ವಾಮಿ, ಮಹದೆವಸ್ವಾಮಿ, ಶಿವಮಲ್ಲಯ್ಯ, ಮುಖಂಡರಾದ ಸೀಹಳ್ಳಿ ಗುರುಮೂರ್ತಿ, ಕುರುಬೂರು ಗೌರಿಶಂಕರ್, ಭೃಂಗೇಶ್, ವೀರೇಶ್, ಕಿಟ್ಟಿ, ಸಂಘದ ಮುಖ್ಯಾಧಿಕಾರಿ ಶ್ರೀನಿವಾಸ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.