

ನಂಜನಗೂಡು: ಸಹಕಾರ ಕ್ಷೇತ್ರದಲ್ಲಿ ಹೈನುಗಾರಿಕೆ ಹೆಮ್ಮೆರವಾಗಿ ಬೆಳೆಯುತ್ತಿದೆ ಎಂದು ಮೈಮುಲ್ ಅಧ್ಯಕ್ಷ ಚೆಲುವರಾಜ್ ತಿಳಿಸಿದರು.
ಗ್ರಾಮದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇನ್ನೂ ಹೆಚ್ಚಿನ ರೀತಿಯಲ್ಲಿ ರೈತರು ಹಾಲು ಉತ್ಪಾದನೆ ಮಾಡಬೇಕು. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಆದರೆ, ಸಹಕಾರ ಸಂಘದಲ್ಲಿ ರೈತರು ಉತ್ಪತ್ತಿ ಮಾಡುತ್ತಿರುವ ಹಾಲಿನಿಂದ ಮೈಸೂರು ಜಿಲ್ಲೆಯಲ್ಲಿ 10 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದೆ. ಜಿಲ್ಲೆಯಲ್ಲಿ 4 ಲಕ್ಷ ಲೀಟರ್ ಮಾರಾಟ ಆಗುತ್ತಿದೆ. ಇನ್ನುಳಿದ ಹಾಲನ್ನು ಬೇರೆ ಜಿಲ್ಲೆ ಮತ್ತು ರಾಜ್ಯಕ್ಕೆ ಕಳುಹಿಸಲಾಗುತ್ತಿದೆ. ಅಲ್ಲದೆ ಶಾಲಾ ಮಕ್ಕಳಿಗೂ ಅನುಕೂಲವಾಗುವಂತೆ ಹಾಲಿನ ಪೌಡರ್ ಮಾಡಲಾಗುತ್ತಿದೆ. ಒಕ್ಕೂಟದಿಂದ ರೈತರಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡಲಾಗುತ್ತಿದೆ ಎಂದರು.
ಹೈನುಗಾರರಿಗೆ ವಿಮೆ ಮಾಡಿಸಲಾಗುತ್ತಿದೆ. 65 ಸಾವಿರ ಜನ ಷೇರುದಾರರು ಇದ್ದಾರೆ. 21 ಸಾವಿರ ಜನ ಉಪಯೋಗ ಮಾಡಿಕೊಂಡಿದ್ದಾರೆ. ಇನ್ನುಳಿದ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ತಿಂಗಳು ಹಸುಗಳಿಗೆ ರಿಯಾಯಿತಿ ದರದಲ್ಲಿ ಮ್ಯಾಟ್ ಕೊಡಲು ನಿರ್ಧಾರ ಮಾಡಿದ್ದೇವೆ. ರಾಸುಗಳಿಗೆ ವಿಮೆ ಮಾಡಿಸುವುದನ್ನು ಮರೆಯಬಾರದು. ವಿಮೆ ಮಾಡಿಸುವುದರಿಂದ ಹಸುಗಳು ಮೃತಪಟ್ಟ ಸಂದರ್ಭದಲ್ಲಿ ಸಹಾಯವಾಗಲಿದೆ ಎಂದರು.
ಮೈಮುಲ್ ಮಾಜಿ ಅಧ್ಯಕ್ಷ ಕೆ.ಜಿ.ಮಹೇಶ್ ಮಾತನಾಡಿ, ಮೈಸೂರು ಜಿಲ್ಲೆಯಿಂದಲೇ ಅತಿ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಸಹಕಾರ ಸಂಘಗಳನ್ನು ನಡೆಸುವುದು ಅಷ್ಟು ಸುಲಭವಲ್ಲ. ತಿಂಗಳಲ್ಲಿ ಮೂರು ಬಾರಿ ರೈತರಿಗೆ ಹಣವನ್ನು ಜಮೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಒಕ್ಕೂಟದ ನಿರ್ದೇಶಕ ಸದಾನಂದ ಮಾತನಾಡಿ, ಸಹಕಾರ ಸಂಘದಲ್ಲೂ ರಾಜಕಾರಣ ನಡೆಯುತ್ತಿದೆ. ಪ್ರತಿ ಚುನಾವಣೆಗಳು ಪ್ರತಿಷ್ಠೆ ಮತ್ತು ಹಣದ ರೂಪವನ್ನು ಪಡೆದುಕೊಂಡಿವೆ. ಇವರ ಪೈಪೋಟಿಯಿಂದ ಚುನಾವಣೆ ನಡೆಯುತ್ತಿದ್ದು ಸಹಕಾರ ಸಂಘದಲ್ಲೂ ರಾಜಕೀಯ ಬೆಳವಣಿಗೆ ಕಂಡಿದೆ. ಸಹಕಾರ ಸಂಘದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಸಂಘಗಳು ಅಭಿವೃದ್ಧಿ ಹೊಂದುತ್ತವೆ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹೆಚ್ಚು ಹಾಲು ಉತ್ಪಾದನೆ ಮಾಡಿದ ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್ ವಿತರಣೆ ಮಾಡಲಾಯಿತು. ಇದೇ ವೇಳೆ ಮೈಮುಲ್ ಅಧ್ಯಕ್ಷ ಚೆಲುವರಾಜ್ ಸಹಕಾರ ಸಂಘಕ್ಕೆ 50 ಸಾವಿರ ರೂ. ಧನಸಹಾಯ ನೀಡಿದರು.
ಹದಿನಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಸಿ ಶಿವಪ್ಪ, ಒಕ್ಕೂಟದ ನಿರ್ದೇಶಕರಾದ ನೀಲಾಂಬಿಕೆ, ಉಮಾಶಂಕರ್, ಓಂ ಪ್ರಕಾಶ್, ಲೀಲಾ ನಾಗರಾಜು, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯ್ಕ, ವ್ಯವಸ್ಥಾಪಕ ಕರಿ ಬಸವರಾಜು, ಉಪ ವ್ಯವಸ್ಥಾಪಕ ಸಂತೋಷ್, ಸಹಾಯಕ ವ್ಯವಸ್ಥಾಪಕ ಅಕ್ಷಯ್ ಕುಮಾರ್, ಕೆ.ಅಶ್ವಿನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಣ್ಣತಾಯಮ್ಮ, ನಾಡಗೌಡ ಸಿದ್ದಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜು, ಜ್ಯೋತಿ, ಸೋಮಣ್ಣ, ರವಿಕುಮಾರ್, ಜಿಪಂ ಮಾಜಿ ಸದಸ್ಯ ನಂಜಪ್ಪ, ಡೇರಿ ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ವಿರೂಪಾಕ್ಷ, ಸಹಾಯಕರಾದ ನಾಗರಾಜು, ಗುರುಪ್ರಸಾದ್, ಚನ್ನಬಸವಣ್ಣ, ನಿರ್ದೇಶಕರಾದ ಮಹದೇವಸ್ವಾಮಿ, ಉಮೇಶ್, ಮಹದೇವಸ್ವಾಮಿ, ಪಿ.ಎಸ್.ನಂಜುಂಡಸ್ವಾಮಿ, ಶಿವಲಿಂಗ, ಮಲ್ಲೇಗೌಡ, ರೇಣುಕಾದೇವಿ, ರಾಜಮ್ಮ, ಮಹದೇವಮ್ಮ, ನಿಂಗಮ್ಮ ಭಾಗವಹಿಸಿದ್ದರು.