

ಗುಂಡ್ಲುಪೇಟೆ: ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ವಿತರಿಸಲು ಬೆಳೆಸುವ ಸಸಿಗಳ ಬೆಲೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿದ್ದು, ಇದರಿಂದ ಸಸಿಗಳ ಖರೀದಿಗೆ ರೈತರು ಹಿಂದೇಟು ಹಾಕುವಂತಾಗಿದೆ.
ಉತ್ಪಾದನಾ ವೆಚ್ಚದ ಹೆಚ್ಚಳದಿಂದ ಅರಣ್ಯ ಇಲಾಖೆಯು ಆರ್‌ಎಸ್‌ಡಿಪಿ ಯೋಜನೆ ಅಡಿಯಲ್ಲಿ ಸಾರ್ವಜನಿಕರಿಗೆ ವಿತರಿಸುವ ಸಸಿಗಳಿಗೆ ಶೇ.80ರಿಂದ 90 ಇದ್ದ ರಿಯಾಯಿತಿ ದರವನ್ನು ಇದೀಗ ಶೇ.50ಕ್ಕೆ ಇಳಿಸಿ ಆದೇಶ ಹೊರಡಿಸಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದರ ನಿಗದಿಪಡಿಸಿ ಸುತ್ತೋಲೆ ಹೊರಡಿಸಿದ್ದು, ವಿವಿಧ ಅಳತೆಗೆ ಸಂಬಂಧಿಸಿ 1 ರೂ., 3 ರೂ.ದರಕ್ಕೆ ಸಿಗುತ್ತಿದ್ದ ಗಿಡಗಳಿಗೆ 5 ರೂ., 6 ರೂ. ಹಾಗೂ 23 ರೂ.ನೀಡಿ ಖರೀದಿಸಬೇಕಿದೆ.
ಸದ್ಯ ಅರಣ್ಯ ಇಲಾಖೆಯ ಬಫರ್ ವಲಯ ಹಾಗೂ ಸಾಮಾಜಿಕ ಅರಣ್ಯ ವಲಯಗಳು ಸೇರಿ ಸುಮಾರು 1.60 ಲಕ್ಷ ಸಸ್ಯಗಳನ್ನು ಬೆಳೆಸಲಾಗಿದೆ. ಆದರೆ ಕಳೆದ ಸಾಲಿಗಿಂತ ಈ ವರ್ಷ ಅವುಗಳ ಬೆಲೆ ದುಪ್ಪಟ್ಟಾಗಿರುವುದರಿಂದ ಸಸಿಗಳನ್ನು ಕೊಳ್ಳಲು ರೈತರು ಸೇರಿದಂತೆ ಖರೀದಿದಾರರು ಹಿಂದೇಟು ಹಾಕುವಂತಾಗಿದೆ.
ಮಳೆಗಾಲದಲ್ಲಿ ಕೃಷಿ ಚಟುವಟಿಕೆ ಆರಂಭವಾಗಲಿದ್ದು, ಮತ್ತೂಂದೆಡೆ ಅರಣ್ಯ ಇಲಾಖೆ ಸಸಿಗಳನ್ನು ನೆಡುವ ಮೂಲಕ ಹಸಿರು ಹೆಚ್ಚಿಸಲು ಮುಂದಾಗುತ್ತಿದೆ. ಈ ವೇಳೆ ಸಸಿಗಳಿಗೆ ಹೆಚ್ಚು ಬೇಡಿಕೆ ಇದ್ದು, ಈ ಸಾಲಿನಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ ಲಕ್ಷಾಂತರ ಗಿಡ ನೆಡುವ ಗುರಿಯನ್ನು ವಿವಿಧ ಅರಣ್ಯ ವಿಭಾಗಗಳು ಹೊಂದಿವೆ.
ಮಳೆಗಾಲದಲ್ಲಿ ಗಿಡ ನೆಡುವ ರೈತರು ಮತ್ತು ಇತರ ಸಾರ್ವಜನಿಕರು ರಿಯಾಯಿತಿ ದರ ಕಡಿತಗೊಳಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಿಡಗಳನ್ನು ನೆಟ್ಟು ಬೆಳೆಸುವವರಿಗೆ ರಿಯಾಯಿತಿ ದರವನ್ನು ಮುಂದುವರಿಸಿ ಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡಬೇಕು ಎಂಬ ಆಗ್ರಹ ಪರಿಸರವಾದಿಗಳಿಂದ ಕೇಳಿಬರುತ್ತಿದೆ.
ರಿಯಾಯಿತಿ ದರದಲ್ಲಿ ಗಿಡಗಳು ದೊರಕದಿದ್ದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸುವ ಸಾಧ್ಯತೆ ಕಡಿಮೆಯಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.