ಸಶಸ್ತ್ರ ಪಡೆಗಳ ಧ್ವಜ ಅನಾವರಣ ಮಾಡಿದ ಡಿಸಿ

bkt-7-7
Published on

ಬಾಗಲಕೋಟೆ: ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಶಸ್ತ್ರ ಪಡೆಗಳ ಧ್ವಜಗಳನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಗುರುವಾರ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಾನಕಿ ಕೆ.ಎಂ ಮಾತನಾಡಿ ದೇಶದಲ್ಲಿ ಸೈನಿಕರ ಪಾತ್ರ ಮಹತ್ವವಾಗಿದ್ದು, ಸೈನಿಕರು ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರಂತೆ ದೇಶದ ರಕ್ಷಣೆಗಾಗಿ ವೀರ ಮರಣ ಹೊಂದಿದ ಯೋಧರ ಕುಟುಂಬಗಳಿಗಾಗಿ ಹಾಗೂ ದೇಶದ ರಕ್ಷಣಾ ಪಡೆಯ ಉನ್ನತಿಗಾಗಿ ಧ್ವಜನಿಧಿ ಸಂಗ್ರಹಣೆಯಿಂದ ಬಂದ ಮೊತ್ತ ಬಳಕೆಯಾಗುತ್ತದೆ. ಎಲ್ಲ ನಾಗರಿಕರು ಧ್ವಜನಿಧಿ ಸಂಗ್ರಹಣೆಯಲ್ಲಿ ಸ್ವ-ಇಚ್ಛೆಯಿಂದ ಪಾಲ್ಗೊಳ್ಳಲು ತಿಳಿಸಿದರು.
ಪ್ರತಿ ವರ್ಷ ಜಿಲ್ಲೆಗೆ ಒಟ್ಟು 4 ಲಕ್ಷ ರೂ.ಗಳ ಗುರಿ ನಿಗದಿ ಇದ್ದು, ಕಳೆದ ವರ್ಷ ಗುರಿಗಿಂತ ಹೆಚ್ಚು ಧ್ವಜ ಮಾರಾಟ ಮಾಡಿ ನಿಧಿ ಸಂಗ್ರಹಿಸಲಾಗಿದೆ. ಇದಕ್ಕೆ ರಾಜಭವನಕ್ಕೆ ಜಿಲ್ಲಾಧಿಕಾರಿಗಳನ್ನು ಕರೆಯಿಸಿ ಪಾರಿತೋಷಕ ನೀಡಿದ್ದಾರೆ ಎಂದು ಪ್ರಭಾರಿ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹಾಗೂ ತಹಶೀಲ್ದಾರ ಅಮರೇಶ ಪಮ್ಮಾರ ತಿಳಿಸಿದಾಗ ಈ ವರ್ಷವು ಸಹಿತ ಗುರಿಗಿಂತ ಹೆಚ್ಚು ಧ್ವಜನಿಧಿ ಸಂಗ್ರಹಕ್ಕೆ ಕ್ರಮಕೈಗೊಳ್ಳಲು ತಿಳಿಸಿದರು.

ಮಾಜಿ ಸೈನಿಕರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಅವರೆಲ್ಲ ಬೇಡಿಕೆಗಳನ್ನು ಪಟ್ಟಿ ಮಾಡಿಕೊಡಲು ಅಮರೇಶ ಪಮ್ಮಾರ ಅವರಿಗೆ ಸೂಚಿಸಿದರು. ಮುಖ್ಯವಾಗಿ ಮಾಜಿ ಸೈನಿಕರಿಗೆ ಕಲಾಭವನದ ನಿರ್ಮಾಣಕ್ಕೆ ಅನುಮೋದನೆ ದೊರೆತು ನಿರ್ಮಿತಿ ಕೇಂದ್ರ ಕೊಡಲಾಗಿದೆ. ಇನ್ನು ಕಟ್ಟಡ ನಿರ್ಮಾಣ ಕಾರ್ಯವಾಗಿಲ್ಲ ಎಂದು ತಿಳಿಸಿದಾಗ ಇದಕ್ಕೆ ಸಂಬಂಧಿಸಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದರು. ಅನುಮೋದನೆ ಪತ್ರ ಬಂದಿದೆ ಹೊರತು ಅದಕ್ಕೆ ಸಂಬಂಧಿಸಿದ ಅನುದಾನ ಬಂದಿರುವದಿಲ್ಲ. ಅನುದಾನ ಬಿಡುಗಡೆಯಾದ ಮೇಲೆ ಕೆಲಸ ಪ್ರಾರಂಭಿಸುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಿಂದ ಮಾಜಿ ಸೈನಿಕರಿಗೆ ಹುತಾತ್ಮ ಯೋಧರಿಗೆ ಹಾಗೂ ವಿಕಲಚೇತನರಿಗೆ ನಿವೇಶನ ಕೊಡುವುದಾಗಿ ತಿಳಿಸಿದ್ದು, ಇಲ್ಲಿಯವರೆಗೆ ಯಾರಿಗೂ ನಿವೇಶನ ನೀಡಿಲ್ಲ. ಮೂರನೇ ಯುನಿಟ್ ಅಭಿವೃದ್ದಿಗೊಳ್ಳುತ್ತಿದ್ದು, ಮಾಜಿ ಸೈನಿಕರಿಗೆ ನಿವೇಶನ ಮೀಸಲಿರುವಂತೆ ಜಿಲ್ಲಾಧಿಕಾರಿಗಳಲ್ಲಿ ಕೋರಿದರು. ಸೈನಿಕ ಮಂಡಳಿ ಸಭೆ ಸಹ ನಡೆದಿರುವದಿಲ್ಲ ಸಭೆ ನಡೆಸುವ ಕುರಿತು ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ 1 ರಿಂದ 10ನೇ ತರಗತಿವರೆಗೆ ಮಾತ್ರವಿದ್ದು, 12 ತರಗತಿಯ ವರೆಗೆ ವಿಸ್ತರಣೆ ಮಾಡಲು ಕ್ರಮವಹಿಸುವಂತೆ ಮಾಜಿ ಸೈನಿಕರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸೈನಿಕ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಸುಭೇದಾರ ರಾಠೋಡ ಸೇರಿದಂತೆ ಮಾಜಿ ಸೈನಿಕರು, ಹುತಾತ್ಮ ಯೋಧರ ಕುಟುಂಬಸ್ಥರು ಸೇರಿದಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಾರ್ಯಾಲಯದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net