ಸರ್ವಜ್ಞನಗರ, ಹುಬ್ಬಳಿಯವರ ಓಣಿ ಸೀಲ್​ಡೌನ್

28 rtl 01
Published on

ರಟ್ಟಿಹಳ್ಳಿ: ತಾಲೂಕಿನ ಮಾಸೂರು ಗ್ರಾಮದಲ್ಲಿ 5 ಜನರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮದ ಸರ್ವಜ್ಞ ನಗರ ಮತ್ತು ಹುಬ್ಬಳಿಯವರ ಓಣಿಯನ್ನು ಸೀಲ್​ಡೌನ್ ಮಾಡಲಾಗಿದೆ. ಭಾನುವಾರ ಸ್ಥಳಕ್ಕೆ ತಹಸೀಲ್ದಾರ್ ಕೆ. ಗುರುಬಸವರಾಜ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತು ಪಿ.ಎಸ್.ಐ. ಎಂ.ಟಿ. ದೀಪು ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.

ತಹಸೀಲ್ದಾರ್ ಗುರುಬಸವರಾಜ ಮಾತನಾಡಿ, ಶಿಕಾರಿಪುರ ತಾಲೂಕಿನ ಖವಾಸಪುರ ಗ್ರಾಮದ ವೃದ್ಧೆ ಜೂ. 20ರಂದು ಕರೊನಾ ವೈರಸ್​ನಿಂದಾಗಿ ಮರಣ ಹೊಂದಿದ್ದರು. ಇವರು ತಮ್ಮ ಮೊಮ್ಮಕ್ಕಳ ವಿವಾಹಕ್ಕಾಗಿ ರಾಮತೀರ್ಥ ಮತ್ತು ಮಾಸೂರು ಗ್ರಾಮಕ್ಕೆ ಆಗಮಿಸಿದ್ದರು. ಅದ್ದರಿಂದ ವೃದ್ಧೆಯ ಪ್ರಾಥಮಿಕ ಸಂಪರ್ಕದಲ್ಲಿರುವ ರಾಮತೀರ್ಥ ಗ್ರಾಮದಿಂದ 25 ಮತ್ತು ಮಾಸೂರಿನ 6 ಜನರನ್ನು ಹಿರೇಕೆರೂರು ತಾಲೂಕಿನ ದೂದಿಹಳ್ಳಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಸ್ವ್ಯಾಬ್ ಪರೀಕ್ಷೆಯಲ್ಲಿ ಇಲ್ಲಿನ 4 ಜನರಿಗೆ ಹಾಗೂ ಮಾಸೂರಿನ ಓರ್ವ ವೈದ್ಯರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಮಾಸೂರಿನ ಸರ್ವಜ್ಞ ನಗರ ಮತ್ತು ಹುಬ್ಬಳಿಯರ ಓಣಿಯನ್ನು ಸೀಲ್​ಡೌನ್ ಮಾಡಲಾಗಿದೆ ಎಂದರು.

ಗ್ರಾಮದಲ್ಲಿ ಈಗಾಗಲೇ ಸಂಪೂರ್ಣವಾಗಿ ಕ್ರಿಮಿನಾಶಕ ಔಷಧಗಳನ್ನು ಸಿಂಪಡಣೆ ಮಾಡಲಾಗಿದೆ. ಸೋಂಕು ದೃಢಪಟ್ಟ ವ್ಯಕ್ತಿಗಳ ದ್ವಿತೀಯ ಸಂಪರ್ಕದಲ್ಲಿರುವವರ ಬಗ್ಗೆ ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಮಾಸ್ಕ್ ಧರಿಸದಿದ್ದರೆ ದಂಡ

ತಾಲೂಕಿನಲ್ಲಿ ಕರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೆ ಓಡಾಡುವವರಿಗೆ ದಂಡ ವಿಧಿಸಲಾಗುವುದು. ಎಲ್ಲರೂ ಮಾಸ್ಕ್ ಧರಿಸಿಯೇ ಸಂಚಾರ ಮಾಡಬೇಕು. ವೈರಸ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಪಿ.ಎಸ್.ಐ. ಆರ್. ಆಶಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net