ಸರ್ವಕಾಲಕ್ಕೂ ಶ್ರೇಷ್ಠ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್

14M.D.R.10
Published on

ಮದ್ದೂರು: ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ವಕಾಲಕ್ಕೂ ಶ್ರೇಷ್ಠ ಅರಸ ಎಂದು ಇತಿಹಾಸ ಪ್ರಾಧ್ಯಾಪಕ ಡಾ.ಎನ್.ಜಿ. ಪ್ರಕಾಶ ಅಭಿಪ್ರಾಯಪಟ್ಟರು.


ತಾಲೂಕಿನ ಕೊಪ್ಪ ಸರ್ಕಾರಿ ಪದವಿ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಸಾಂಸ್ಕೃತಿಕ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 139ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮ್ರಾಜ್ಯವನ್ನು ವಿಸ್ತರಿಸದೆ, ದಿಗ್ವಿಜಯಗಳನ್ನು ಮಾಡದೆ ಸುಧಾರಣೆಗಳಿಂದಲೇ ಜಗತ್ತಿನಲ್ಲಿ ಜನಪ್ರಿಯರಾದವರು ನಾಲ್ವಡಿ ಎಂದು ಬಣ್ಣಿಸಿದರು.


ಶಿಕ್ಷಣ, ಆರೋಗ್ಯ, ಸಾರಿಗೆ, ಲೋಕೋಪಯೋಗಿ ಕೆಲಸಗಳು…ಹೀಗೆ ನೂರಾರು ಕಾರ್ಯಗಳನ್ನು ಅವಧಿಯಲ್ಲಿ ಕೈಗೊಂಡು ಮೈಸೂರಿನ ಮಾದರಿ ಸಂಸ್ಥಾನವನ್ನಾಗಿ ಮಾಡಿದ ಕೀರ್ತಿ ನಾಲ್ವಡಿ ಕೃಷ್ಣರಾಜರದ್ದು. ಪ್ರಜೆಗಳಿಂದ, ಅರಸರಿಂದ ಮಾತ್ರವಲ್ಲ, ಬ್ರಿಟಿಷರಿಂದ ಮೆಚ್ಚುಗೆ ಗಳಿಸಿ ಇವತ್ತಿಗೂ ಹೆಜ್ಜೆ ಗುರುತುಗಳನ್ನು ಮೂಡಿಸಿರುವುದು ಅವರ ಸಾಧನೆಯೇ ಸರಿ. ವಿದ್ಯಾರ್ಥಿಗಳು ನಾಡು ನುಡಿ, ದೇಶಪ್ರೇಮ, ಉತ್ತಮ ಜೀವನ ನಡೆಸಲು ನಾಲ್ವಡಿ ಮಾದರಿ ಎಂದರು.


ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಮಾತನಾಡಿ, ಭಾರತ ದೇಶದಲ್ಲೇ ಮಹಿಳೆಯರಿಗೆ ಮೊದಲ ಬಾರಿಗೆ ಶಿಕ್ಷಣವನ್ನು ಕೊಡಿಸಿದ ಹಾಗೂ 530ಕ್ಕೂ ಹೆಚ್ಚು ಶಾಲೆಗಳನ್ನು ಹೆಣ್ಣು ಮಕ್ಕಳಿಗಾಗಿ ಸ್ಥಾಪಿಸಿದ ಕೀರ್ತಿ ನಾಲ್ವಡಿ ಅವರದು ಎಂದು ಹೇಳಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಸಂತೋಷ್, ಇತಿಹಾಸ ವಿಭಾಗದ ಶಶಿಶೇಖರ್, ಶ್ರೀನಿವಾಸ್, ಲತಾ, ಶ್ರೀಲತಾ, ಸೌಮ್ಯಾ, ಕೆಂಪೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net