ಸರ್ಕಾರಿ ಸವಲತ್ತು ಅರ್ಹರಿಗೆ ತಲುಪಿಸಲು ಯತ್ನ

IMG_20230515_130316 (1)
Published on

ಹೊಳೆನರಸೀಪುರ: ನಾನು ಸೋತಿಲ್ಲ…ನನ್ನ ಸೋಲಿಗೆ ಯಾರೂ ಕಣ್ಣೀರು ಹಾಕಬೇಡಿ…ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಕುಟುಂಬ, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಪ್ರಚಾರ ಮಾಡಿದ್ದರೂ ನೀವು ನೀಡಿರುವ ಮತ ನನ್ನ ಮೇಲಿಟ್ಟಿರುವ ವಿಶ್ವಾಸ, ನಂಬಿಕೆಯನ್ನು ಎತ್ತಿ ತೋರುತ್ತದೆ ಎಂದು ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಶ್ರೇಯಸ್ ಪಟೇಲ್ ಹೇಳಿದರು.


ಪಟ್ಟಣದ ಜಯಲಕ್ಷ್ಮೀ ರೈಸ್‌ಮಿಲ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಗೆದ್ದವರನ್ನು ಅಭಿನಂದಿಸುವುದು ಸಂಪ್ರದಾಯ. ನಾನು ಸೋತಿದ್ದೇನೆ. ಆದರೂ ಈ ಮಟ್ಟದ ಗೌರವ ನೀಡುತ್ತಿರುವುದು ಕಾಂಗ್ರೆಸ್‌ಗೆ ನೀಡಿರುವ ಬೆಂಬಲವನ್ನು ಎತ್ತಿ ತೋರುತ್ತದೆ ಎಂದರು.


ಕಾಂಗ್ರೆಸ್ ಪರವಾಗಿ ಜನಾದೇಶ ಬಂದಿದ್ದು, ಯಾರಿಂದಲೂ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಅರ್ಹರಿಗೆ ಪಕ್ಷ ಭೇದ ಮರೆತು ಕೊಡಿಸಲಾಗುವುದು. ಮುಂಬರುವ ತಾಲೂಕು ಪಂಚಾಯಿತಿ, ಪುರಸಭೆ, ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಲಾಗುವುದು ಎಂದರು.


ಕೆಪಿಸಿಸಿ ಸದಸ್ಯೆ ಅನುಪಮಾ ಮಾತನಾಡಿ, ಜನರ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಲಾಗುವುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು, ಮುಖಂಡರಾದ ಬಾಗೀವಾಳು ಮಂಜುನಾಥ್, ಥಾಮಸ್, ಆದಿಹಳ್ಳಿ ಮಂಜಣ್ಣ, ಮೊಸಳೆಹೊಸಹಳ್ಳಿ ಮಂಜುನಾಥ್, ಬೋರೇಗೌಡ, ದಂಡೋರ ವಿಜಯಕುಮಾರ್, ವಕೀಲ ಸೂರನಹಳ್ಳಿ ಮೋಹನ್, ಅಲಿಅಬ್ಬಾಸ್, ಒಳಂಬಿಗೆ ನಾರಾಯಣ, ಎಚ್.ಕೆ.ಹರೀಶ್, ಎಚ್.ಟಿ.ಲಕ್ಷ್ಮಣ, ಹರದನಹಳ್ಳಿ ಪುಟ್ಟರಾಜು, ಗಂಗಾಧರಾಚಾರ್, ಹೇಮಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net