ಸರ್ಕಾರಿ ಶಾಲೆಗಳು ಖಾಸಗಿ ಸ್ಕೂಲ್‌ಗಳಿಗಿಂತ ಕಡಿಮೆ ಇಲ್ಲ

01 HANUR 2
Published on

ಹನೂರು: ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಾಗೂ ಅಗತ್ಯ ಮೂಲಸೌಕರ್ಯ ಹೊಂದುವಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತೇನೂ ಕಡಿಮೆ ಇಲ್ಲ ಎಂದು ಬಂಡಳ್ಳಿ ಗುರುಮಲ್ಲೇಶ್ವರ ಮಠದ ಶ್ರೀಫಲಹಾರ ಪ್ರಭುದೇವ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಬಂಡಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ಸಮೀಪದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಕೆಲವರು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಆದರೆ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ ಮಾತ್ರ. ಇಲ್ಲಿನ ಶಿಕ್ಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹಾಗೆಯೇ ಸರ್ಕಾರ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಿಕೊಟ್ಟಿದೆ. ಆದ್ದರಿಂದ ಪಾಲಕರು ಈ ಬಗ್ಗೆ ಮನದಟ್ಟು ಮಾಡಿಕೊಂಡು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಇದಕ್ಕೆ ಬಂಡಳ್ಳಿ ಗ್ರಾಮದ ಶಾಲೆಯೇ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.

ಚಲನಚಿತ್ರ ನಿರ್ದೇಶಕ ಎಸ್.ಮಹೇಂದರ್ ಮಾತನಾಡಿ, ನಾನು 1ರಿಂದ 4ನೇ ತರಗತಿಯವರೆಗೆ ಶಿಕ್ಷಣ ಪಡೆದ ಬಂಡಳ್ಳಿ ಗ್ರಾಮದ ಶಾಲೆಗೆ 88 ವರ್ಷದ ಇತಿಹಾಸವಿದೆ. ಇಲ್ಲಿ ಶಿಕ್ಷಣ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗವನ್ನು ಪಡೆದು ಜೀವನವನ್ನು ರೂಪಿಸಿಕೊಂಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಓದಿಗೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಸಾಧನೆಗೈದು ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಎಸ್.ಮಹೇಂದರ್, ಅಂತಾರಾಷ್ಟ್ರೀಯ ಖೋ ಖೋ ಪಂದ್ಯದಲ್ಲಿ ಚಿನ್ನದ ಪದಕ ಗಳಿಸಿದ ಚೈತ್ರಾ ಹಾಗೂ ಮಾದರಿ ಕೃಷಿಕ ಕರ್ಪಯ್ಯ ಅವರನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕ ಶಾಹುಲ್ ಆಹಮದ್, ಬಿಇಒ ಗುರುಲಿಂಗಯ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಗ್ರಾಪಂ ಅಧ್ಯಕ್ಷೆ ಯಶೋದಮ್ಮ, ಉಪಾಧ್ಯಕ್ಷೆ ಅಬೀದಾ ಖಾನಂ, ಸದಸ್ಯರಾದ ಜುಲ್ಫಿಕರ್ ಆಹಮದ್, ನಾಗರಾಜು, ನಾಗಯ್ಯ, ಮುಖ್ಯಶಿಕ್ಷಕ ಗುರುಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net