ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಿ

15_HSN_09
ಬೇಲೂರು ತಾಲೂಕಿನ ಬಿ.ಹೊಸಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗಂಗಾಧರಪ್ಪ ಮತ್ತು ಬಲ್ಲೇನಹಳ್ಳಿ ಮಧು, ರಂಗನಾಥ್ ಅವರು ಕಲಿಕಾ ಸಾಮಗ್ರಿಗಳಾದ ಪುಸ್ತಕ, ಲೇಖನಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಶನಿವಾರ ಕೊಡುಗೆಯಾಗಿ ನೀಡಿದರು. ಮುಖ್ಯಶಿಕ್ಷಕ ಮಂಜುನಾಥ್ ಮತ್ತು ಸಹ ಶಿಕ್ಷಕಿ ಹೇಮಾ ಇದ್ದರು.
Published on

ಬೇಲೂರು: ತಾಲೂಕಿನ ಬಿ.ಹೊಸಳ್ಳಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗೆ ಇಲ್ಲಿನ ನಿವೃತ್ತ ಮುಖ್ಯಶಿಕ್ಷಕರು ಮತ್ತು ದಾನಿಗಳಾದ ಗಂಗಾಧರಪ್ಪ ಮತ್ತು ಬಲ್ಲೇನಹಳ್ಳಿ ಮಧು, ರಂಗನಾಥ್ ಅವರು ಶಾಲಾ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲಿಕಾ ಸಾಮಗ್ರಿಗಳಾದ ಪುಸ್ತಕ, ಲೇಖನಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಶನಿವಾರ ಕೊಡುಗೆಯಾಗಿ ನೀಡಿದರು.

ಗಂಗಾಧರಪ್ಪ ಮಾತನಾಡಿ, ಸರ್ಕಾರ ಈಗಾಗಲೇ ಮಕ್ಕಳ ಕಲಿಕೆಗೆ ಅಗತ್ಯವಿರುವ ವಸ್ತುಗಳನ್ನು ಉಚಿತವಾಗಿ ನೀಡುವ ಮೂಲಕ ಯಾವುದೇ ಮಕ್ಕಳು ಕಲಿಕೆಯಿಂದ ದೂರ ಉಳಿಯದಂತೆ ನೋಡಿಕೊಳ್ಳುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ಶಾಲೆಗೆ ನೀಡಿದ್ದೇವೆ. ಅವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಬೇಕು. ಇತ್ತೀಚಿನ ದಿನದಲ್ಲಿ ಬಹುತೇಕರು ಸರ್ಕಾರಿ ಶಾಲೆಗಳ ಬಗ್ಗೆ ಮೂಗುಮುರಿಯುವ ಕಾಲಘಟ್ಟದಲ್ಲಿದ್ದಾರೆ. ಆದರೆ ಸರ್ಕಾರಿ ಶಾಲೆಯಲ್ಲಿ ನುರಿತ ಶಿಕ್ಷಕರು ಇರುವ ಕಾರಣದಿಂದ ಪ್ರತಿಯೊಬ್ಬರೂ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಬೇಕಿದೆ ಎಂದರು.

ಮುಖ್ಯಶಿಕ್ಷಕ ಮಂಜುನಾಥ್ ಮಾತನಾಡಿ, ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ಅನುದಾನದ ಜತೆಯಲ್ಲಿ ದಾನಿಗಳ ಸಹಕಾರ ಅತ್ಯಗತ್ಯ. ಈ ಕಾರಣದಿಂದ ಹತ್ತಾರು ಸ್ಥಳೀಯರು ಶಾಲೆಗೆ ದಾನದ ರೂಪದಲ್ಲಿ ವಸ್ತುಗಳನ್ನು ನೀಡುತ್ತಾ ಬಂದಿದ್ದಾರೆ. ನಿವೃತ್ತ ಮುಖ್ಯಶಿಕ್ಷಕ ಗಂಗಾಧರಪ್ಪ ಅವರು ಕಲಿತಾ ಸಾಮಗ್ರಿಗಳನ್ನು ಮತ್ತು ಬಲ್ಲೇನಹಳ್ಳಿ ಮಧು ಹಾಗೂ ರಂಗನಾಥ್ ಅವರು ನಗದು ರೂಪದಲ್ಲಿ ಶಾಲೆಯ ಅಭಿವೃದ್ಧಿಗೆ ಹಣವನ್ನು ನೀಡುತ್ತಾ ಶಾಲೆಯ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದು ತಿಳಿಸಿದರು. ಸಹ ಶಿಕ್ಷಕಿ ಹೇಮಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net