ಸರ್ಕಾರಿ ಶಾಲೆ ಜಾಗ ಒತ್ತುವರಿ ತೆರವು

19blrp1
Published on

ಬೇಲೂರು: ತಾಲೂಕಿನ ಗೋವಿನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ 2.27 ಎಕರೆ ಜಾಗದ ಒತ್ತುವರಿಯನ್ನು ತಹಸೀಲ್ದಾರ್ ಎಂ.ಮಮತಾ ಅವರು ತೆರವು ಮಾಡಿಸಿ ಸರ್ಕಾರಿ ಶಾಲೆಗೆ ಹಸ್ತಾಂತರಿಸಿದರು.

ತಾಲೂಕಿನ ಕಸಬಾ ಹೋಬಳಿಯ ಗೋವಿನಹಳ್ಳಿ ಗ್ರಾಮದಲ್ಲಿ 2.27 ಎಕರೆ ಸರ್ಕಾರಿ ಶಾಲೆಗೆ ಸೇರಿದ ಜಾಗವಿದ್ದು ಇದನ್ನು ಕೆಲವರು 15 ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದರು. ಜಾಗವನ್ನು ಶಾಲೆಗೆ ಉಳಿಸಲು ಗ್ರಾಮಸ್ಥರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರು. ಆದರೆ, ತಾಲೂಕಿಗೆ ಸಾಕಷ್ಟು ಜನ ಅಧಿಕಾರಿಗಳು ಆಗಮಿಸಿ ಜಮೀನು ಬಿಡಿಸುವುದಕ್ಕೆ ಮುಂದಾದರೂ ಸಾಧ್ಯವಾಗಿರಲಿಲ್ಲ.

ತಹಸೀಲ್ದಾರ್ ಎಂ.ಮಮತಾ, ಗೋವಿನಹಳ್ಳಿ ಗ್ರಾಮಸ್ಥರ ಮನವಿ ಸ್ವೀಕರಿಸಿ ಸ್ಥಳಕ್ಕೆ ತೆರಳಲಿ ದಾಖಲೆಗಳನ್ನು ಪರಿಶೀಲಿಸಿ ತಮ್ಮ ಇಲಾಖೆಯ ಸಿಬ್ಬಂದಿಯೊಂದಿಗೆ ಸರ್ವೇ ಮಾಡಿಸಿದ್ದರು. ಯಾರೂ ಜಾಗವನ್ನು ಬಿಟ್ಟು ಕೊಡದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಮಮತಾರ ಅವರು ಪೊಲೀಸ್ ಸಹಕಾರ ಪಡೆದು ತಮ್ಮ ಸಿಬ್ಬಂದಿಯೊಂದಿಗೆ ಗೋವಿನಹಳ್ಳಿ ಗ್ರಾಮಕ್ಕೆ ತೆರಳಿ ಒತ್ತುವರಿಯಾಗಿದ್ದ ಸರ್ಕಾರಿ ಜಮೀನನ್ನು ಖುದ್ದಾಗಿ ನಿಂತು ತೆರವು ಮಾಡಿಸಿ ಸರ್ಕಾರಿ ಶಾಲೆಗೆ ನೀಡಿದರು.

ಗೋವಿನಹಳ್ಳಿ ಗ್ರಾಮದ ಮುಖಂಡ ರವಿ ಮಾತನಾಡಿ, ಒತ್ತುವರಿ ತೆರವು ಮಾಡುವಂತೆ ಹಲವು ಬಾರಿ ತಹಸೀಲ್ದಾರ್, ಬಿಇಒ ಕಚೇರಿಗೆ ಮನವಿ ಸಲ್ಲಿಸಿ ಸಾಕಾಗಿದ್ದೆವು. ತೆರವು ಮಾಡಲು ಬಂದ ಅಧಿಕಾರಿಗಳನ್ನು ಒತ್ತುವರಿದಾರರು ಹೆದರಿಸಿ ಕಳುಹಿಸುತಿದ್ದರು. ಇದೀಗ ತಹಸೀಲ್ದಾರ್ ತೆರವು ಮಾಡಿರುವುದು ಶ್ಲಾಘನೀಯ. ಗ್ರಾಮಸ್ಥರು, ವಿದ್ಯಾರ್ಥಿಗಳ ಪರವಾಗಿ ತಹಸೀಲ್ದಾರ್‌ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಸಬಾ ರಾಜಸ್ವ ನಿರೀಕ್ಷಕ ನಟರಾಜ್, ಗ್ರಾಮ ಆಡಳಿತ ಅಧಿಕಾರಿ ರಾಜಶೇಖರ್, ಎಎಸ್‌ಐ ಚಂದ್ರು, ಗ್ರಾಮ ಸಹಾಯಕರಾದ ಸಂತೋಷ್, ಸತೀಶ್, ಗ್ರಾಮಸ್ಥರಾದ ಅಭಿಷೇಕ್, ತಿಮ್ಮೇಶ್, ಮಹೇಶ್, ನಾಗರಾಜು, ಬಸವರಾಜು, ಧರ್ಮಯ್ಯ, ಹೊನ್ನಯ್ಯ, ಸುರೇಶ್, ಕೆಂಪಯ್ಯ, ಕೃಷ್ಣಮೂರ್ತಿ, ರಾಮಯ್ಯ ಮಹೇಶ್, ದೇವರಾಜು, ಹುಚ್ಚಯ್ಯ, ಸುಪ್ರೀತ್, ಕುಮಾರಸ್ವಾಮಿ, ನಿಂಗರಾಜು ಇತರರಿದ್ದರು.

ಸರ್ಕಾರಕ್ಕೆ ಸೇರಿದ ಜಮೀನು, ಕೆರೆ-ಕಟ್ಟೆಗಳು, ಸ್ಮಶಾನ ಭೂಮಿ ಇತರ ಜಾಗವನ್ನು ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೆ ತೆರವು ಮಾಡುತ್ತೇವೆ. ಯಾರೂ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಲು ಮುಂದಾಗಬಾರದು. ಒತ್ತುವರಿ ಮಾಡಿರುವುದು ಕಂಡುಬಂದಲ್ಲಿ ತಾವೇ ತೆರವು ಮಾಡಿದರೆ ಒಳಿತು. ಇಲ್ಲದಿದ್ದಲ್ಲಿ ತಾಲೂಕು ಆಡಳಿತದಿಂದ ನಿರ್ದಾಕ್ಷಿಣ್ಯವಾಗಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು.

ಎಂ.ಮಮತಾ, ತಹಸೀಲ್ದಾರ್ ಬೇಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net