

ರಾಣೆಬೆನ್ನೂರ: ಕೇಂದ್ರ ಹಾಗೂ ರಾಜ್ಯ ಸರ್ಕಾರ ರೂಪಿಸುವ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸುವ ಉದ್ದೇಶದಿಂದ ಮಿನಿ ವಿಧಾನಸೌಧ, ನಗರಸಭೆ, ತಾಪಂ ಹಾಗೂ ವಿವಿಧ ಸರ್ಕಾರಿ ಕಚೇರಿಗಳ ಎದುರು ನಾಮಫಲಕ ಅಳವಡಿಸಲಾಗಿದೆ. ಆದರೆ, ಅವುಗಳನ್ನು ಖಾಸಗಿಯವರು ಬಳಸುತ್ತಿದ್ದಾರೆ.
ನಗರದ ಮಿನಿ ವಿಧಾನಸೌಧ, ನಗರಸಭೆ, ತಾಪಂ, ಬಸ್ ನಿಲ್ದಾಣ, ಪೋಸ್ಟ ವೃತ್ತದಲ್ಲಿರುವ ಸರ್ಕಾರಿ ನಾಮಫಲಕದ ಮೇಲೆ ಖಾಸಗಿಯವರು ತಮ್ಮ ನಾಮಫಲಕ ಅಳವಡಿಸುತ್ತಿದ್ದಾರೆ. ಹೀಗಾಗಿ, ಸರ್ಕಾರದ ಯೋಜನೆಗಳ ಮಾಹಿತಿ ಸಾರ್ವಜನಿಕವಾಗಿ ಜನತೆಗೆ ಕಾಣಿಸದಂತಾಗಿದೆ.
ಮುಂದಿನ ತಿಂಗಳು ಶಾಲಾ-ಕಾಲೇಜ್ ಪ್ರವೇಶ ಆರಂಭವಾಗುವ ಮುನ್ಸೂಚನೆ ದೊರೆತಿದ್ದರಿಂದ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ತಮ್ಮ ಕಾಲೇಜ್ಗಳ ವಿದ್ಯಾರ್ಥಿಗಳು ಮಾಡಿದ ಸಾಧನೆಗಳನ್ನು ಆಯಾ ಕಾಲೇಜ್ನವರು ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಜಾಹೀರಾತು ಫಲಕಗಳ ಮೂಲಕ ಅಳವಡಿಸಿದ್ದಾರೆ. ಅಲ್ಲದೆ, ಸರ್ಕಾರಿ ಜಾಹೀರಾತು ಫಲಕದ ಮೇಲೆಯೂ ತಮ್ಮ ಶಾಲಾ-ಕಾಲೇಜ್ನ ಜಾಹೀರಾತು ಫಲಕ ಅಳವಡಿಸುತ್ತಿದ್ದಾರೆ. ಆದರೆ, ಇದನ್ನು ತಡೆಯಬೇಕಾಗಿರುವ ಆಯಾ ಇಲಾಖೆಯ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಆಶ್ಚರ್ಯ ಮೂಡಿಸುತ್ತಿದೆ.
ಸರ್ಕಾರಿ ಯೋಜನೆಗಳ ಬಗ್ಗೆ ಕಚೇರಿಯಲ್ಲಿ ಕೇಳಿದರೂ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡುವುದಿಲ್ಲ. ಆದ್ದರಿಂದ ಕಚೇರಿ ಎದುರಿಗೆ ಹಾಕಿರುವ ನಾಮಫಲಕದಿಂದಾದರೂ ಮಾಹಿತಿ ತಿಳಿದುಕೊಳ್ಳುತ್ತಿದ್ದೇವು. ಆದರೆ, ಖಾಸಗಿ ಶಾಲಾ-ಕಾಲೇಜ್ನವರು ಅವುಗಳನ್ನೂ ಬಿಡದೆ ತಮ್ಮ ಖಾಸಗಿ ಜಾಹೀರಾತು ಪ್ರಕಟಿಸುತ್ತಿದ್ದಾರೆ. ಇದರ ಬಗ್ಗೆ ನಗರಸಭೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕು. | ನಾಗರಾಜ್ ಎಚ್., ಸ್ಥಳೀಯ ನಿವಾಸಿ ಖಾಸಗಿ ಶಾಲಾ-ಕಾಲೇಜ್ನವರು ಖಾಲಿ ಜಾಗದಲ್ಲಿ ನಾಮಫಲಕ ಅಳವಡಿಸಲು ಪರವಾನಗಿ ತೆಗೆದುಕೊಂಡು ಹಾಕುತ್ತಿದ್ದಾರೆ. ಸರ್ಕಾರಿ ನಾಮಫಲಕ ಕಾಣದಂತೆ ಹಾಗೂ ಅದರ ಮೇಲೆ ಹಾಕಲು ಅವಕಾಶವಿಲ್ಲ. ಈ ಬಗ್ಗೆ ಕೂಡಲೆ ಪರಿಶೀಲಿಸಲಾಗುವುದು. ಸರ್ಕಾರಿ ನಾಮಫಲಕದ ಮೇಲೆ ಜಾಹೀರಾತು ಪ್ರಕಟಿಸಿರುವುದನ್ನು ತೆರವುಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತರು