

ಹನೂರು: ಏಳನೇ ವೇತನ ಆಯೋಗದ ವರದಿ ಅನ್ವಯ ಪರಿಷ್ಕೃತ ವೇತನದ ಆರ್ಥಿಕ ಸೌಲಭ್ಯ ನೀಡುವಂತೆ ಒತ್ತಾಯಿಸಿ ಗುರುವಾರ ತಾಲೂಕು ಸರ್ಕಾರಿ ನಿವೃತ್ತ ನೌಕರರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ನಿವೃತ್ತ ಮುಖ್ಯ ಶಿಕ್ಷಕ ಅಮಲದಾಸ್ ಮಾತನಾಡಿ, 2022, ಜು.1ರಿಂದ 2024, ಜು.31ರ ಅವಧಿಯಲ್ಲಿ 25 ತಿಂಗಳು ಸೇವೆ ಸಲ್ಲಿಸಿ ನಿವೃತ್ತಿಯಾದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತಿ ಉಪಲಬ್ದವನ್ನು ಪಾವತಿಸುವ ವೇಳೆ ಆರ್ಥಿಕ ನಷ್ಟವಾಗಿದ್ದು, ಅನ್ಯಾಯವಾಗಿದೆ. ಆದ್ದರಿಂದ ಸರ್ಕಾರ ಇತ್ತ ಗಮನಹರಿಸಿ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್‌ಜಿ, ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣ ಸೌಲಭ್ಯದ ಲೆಕ್ಕಾಚಾರದ ವ್ಯತ್ಯಾಸದ ಹಣವನ್ನು ನೀಡಬೇಕು. ಈ ಸಂಬಂಧ 2024, ಡಿ.16ರಂದು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ಅಗತ್ಯ ಭರವಸೆ ನೀಡಿದ್ದರು. ಆದರೆ ಈವರೆಗೂ ಕಾರ್ಯಗತವಾಗಿಲ್ಲ. ಈ ದೆಸೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಮನವಿಯಲ್ಲಿ ಸ್ವೀಕರಿಸಿದ ಉಪ ತಹಸೀಲ್ದಾರ್ ನಾಗೇಂದ್ರ ಮಾತನಾಡಿ, ಮನವಿಯನ್ನು ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡುವುದಾಗಿ ತಿಳಿಸಿದರು.
ನಿವೃತ್ತ ನೌಕರರಾದ ಚಿನ್ನಮ್ಮ, ರಾಜಮ್ಮ, ಶಿವಮ್ಮ, ರತ್ನಮ್ಮ, ಸುಶೀಲಮ್ಮ, ನಿರ್ಮಲ, ರಾಣಿ, ನಟೇಶ್, ಕದರಯ್ಯ, ಮರಯ್ಯ, ಗುರುಸ್ವಾಮಿ, ನಂಜಪ್ಪ ಮತ್ತಿತರರಿದ್ದರು.