ಸರ್ಕಾರಿ ಜಾಗದಲ್ಲಿನ ಬಡವರ ಮನೆ ಸಕ್ರಮ

3byd1
Published on

ಬ್ಯಾಡಗಿ: ಸರ್ಕಾರಿ, ಅರಣ್ಯ ಪ್ರದೇಶ ಹಾಗೂ ಇತರ ಜಾಗದಲ್ಲಿ ಬಡವರು ಮನೆ ನಿರ್ವಿುಸಿಕೊಂಡಿದಲ್ಲಿ ನಿಯಮಾವಳಿ ಪ್ರಕಾರ ಸಕ್ರಮಗೊಳಿಸಲಾಗುವುದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಗರ್​ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಭೂಸಾಗುವಳಿಗೆ ಹಿಂದೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಅಲ್ಲಿನ ಭೂಪ್ರದೇಶದ ಆದ್ಯತೆ, ಜಾನುವಾರುಗಳ ಸಂಖ್ಯೆ ಹಾಗೂ ಇತರ ಮಾನದಂಡಗಳ ಮೇರೆಗೆ ಹಾಗೂ ಅರಣ್ಯ ಪ್ರದೇಶದ ಕಾಯ್ದೆಗಳನ್ನು ಪರಿಶೀಲಿಸಿ ಭೂಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರ ವಿತರಿಸಲಾಗುವುದು. ಒಂದು ವೇಳೆ ಈ ಹಿಂದೆ ಅರ್ಹರ ಅರ್ಜಿಗಳು ತಿರಸ್ಕೃತವಾಗಿದಲ್ಲಿ ಅವುಗಳ ಪರಿಶೀಲನೆ ನಡೆಸಲಾಗುವುದು. ತಾಲೂಕಿನಲ್ಲಿ 250 ಎಕರೆಗೂ ಹೆಚ್ಚು ಜಾಗದಲ್ಲಿ ಬಡವರು ಮನೆ ನಿರ್ವಿುಸಿಕೊಂಡಿದ್ದು, ಇಂತಹ ಸಮಸ್ಯೆಗಳನ್ನು ಸಭೆಯಲ್ಲಿ ರ್ಚಚಿಸಲಾಗುವುದು ಎಂದರು.

ತಾಲೂಕಿನ 32 ಸಾವಿರ ಹೆಕ್ಟೇರ್ ಭೂಪ್ರದೇಶದ ಜಮೀನಿನಲ್ಲಿ ಬಿತ್ತನೆ ಬಹುತೇಕ ಪೂರ್ಣಗೊಂಡಿದೆ. ಕೆಲವಡೆ ಮಳೆ ವ್ಯತ್ಯಾಸದಿಂದ ರೈತರು ನಿಧಾನಗತಿಯಲ್ಲಿ ಬಿತ್ತನೆ ನಡೆಸಿದ್ದಾರೆ. ತಾಲೂಕಿನಲ್ಲಿ ಬೀಜ, ಗೊಬ್ಬರ ದಾಸ್ತಾನು ಮಾಡಲಾಗುವುದು. ಕೃಷಿ ಸಹಾಯಕ ನಿರ್ದೇಶಕರಿಂದ ಅಂಕಿ-ಅಂಶಗಳನ್ನು ಪಡೆದಿದ್ದು, ಬೇಡಿಕೆಗನುಗುಣವಾಗಿ ಬೀಜ ಪೂರೈಕೆ ನಡೆದಿದೆ ಎಂದರು.

ರೈತ ಸಮುದಾಯಕ್ಕೆ ಏಕಬೆಳೆ ಪದ್ಧತಿಯಿಂದ ಕೆಲವೊಮ್ಮೆ ನಷ್ಟ ಎದುರಾಗುವ ಸಾಧ್ಯತೆಯಿದ್ದು, ಮಿಶ್ರ ಬೇಸಾಯ, ಸಿರಿಧಾನ್ಯ ಬೆಳೆಗೆ ಮುಂದಾಗಬೇಕು. ಇದರಿಂದ ರೈತರಿಗೆ ಹೆಚ್ಚು ಆರ್ಥಿಕ ಸಬಲತೆ, ಬೆಳೆ ನಷ್ಟ ತಪ್ಪಿಸಲು ಸಾಧ್ಯ. ರಾಗಿ, ಸಜ್ಜೆ, ನವಣೆ, ತೊಗರಿಯಂತ ಏಕಧಾನ್ಯ ಕಾಳುಗಳ ಬಿತ್ತನೆಗೆ ಮುಂದಾಗಬೇಕು. ಸರ್ಕಾರ ಸಿರಿಧಾನ್ಯಗಳನ್ನು ಬಿತ್ತಲು ಪೋ›ತ್ಸಾಹ ನೀಡುತ್ತದೆ ಎಂದರು.

ಸಭೆಯ ಆರಂಭಕ್ಕೂ ಮುನ್ನ ಬಗರ್​ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ನೂತನ ಸದಸ್ಯರಾದ ಕೊಲ್ಲಾಪುರ ಗ್ರಾಮದ ಸಿದ್ದಯ್ಯ ಪಾಟೀಲ, ಘಾಳಪೂಜಿ ಗ್ರಾಮದ ಸುರೇಶ ಕಳ್ಳಿಮನಿ ಹಾಗೂ ಬುಡಪನಹಳ್ಳಿಯ ಪುಟ್ಟಪ್ಪ ಸುಂಕಾಪುರ ಅವರಿಗೆ ಸನ್ಮಾನ ಮಾಡಲಾಯಿತು. ವಿಧಾನಸಭೆ ಮತಕ್ಷೇತ್ರದ ಶಾಸಕರು, ಸ್ಥಳೀಯ ತಹಸೀಲ್ದಾರ್ ಸೇರಿದಂತೆ ಐವರ ಸಮಿತಿ ರಚನೆಯಾಗಿದೆ.

ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ತಹಸೀಲ್ದಾರ್ ಶರಣವ್ವ ಕಾರಿ, ಉಪತಹಸೀಲ್ದಾರ್ ಬಿ.ವಿ. ಕಟ್ಟಿಮನಿ, ಕಂದಾಯ ನಿರೀಕ್ಷಕ ರಾಘವೇಂದ್ರ ಕುಲಕರ್ಣಿ, ಗುಂಡಪ್ಪ ಹುಬ್ಬಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net