ಸರ್ಕಾರದ ಯೋಜನೆಗಳು ತಲುಪಲು ಸಹಕರಿಸಿ

10blrp1
Published on

ಬೇಲೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ತಿಂಗಳ ವ್ಯಕ್ತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಯಮಿ, ಸಮಾಜ ಸೇವಕ ಎನ್.ಆರ್.ಸಂತೋಷ್ ಉದ್ಘಾಟಿಸಿದರು.


ಪತ್ರಕರ್ತರು ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತಿದ್ದಾರೆ. ಜನರಿಗೆ ಮೂಲ ಸೌಲಭ್ಯಗಳು ಸಾರ್ವಜನಿಕರಿಗೆ ಸರಿಯಾಗಿ ತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜತೆಗೆ ಬೇಲೂರು ಪ್ರವಾಸಿ ತಾಣವಾಗಿರುವುದರಿಂದ ಪ್ರವಾಸಿಗರ ಹಾಗೂ ಸ್ಥಳೀಯರಿಗೆ ಅಗತ್ಯವಾಗಿ ಬೇಕಾದ ಸೌಕರ್ಯಗಳನ್ನು ಸರ್ಕಾರದಿಂದ ಬರುವಂತೆ ಮಾಡುವ ಮೂಲಕ ಅಭಿವೃದ್ಧಿಗೆ ಮುಂದಾಗಬೇಕು ಎಂದರು.


ತಿಂಗಳ ವ್ಯಕ್ತಿ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಅರಣ್ಯ ಇಲಾಖೆ ನೌಕರ ನಾಗರಾಜ್ ಮಾತನಾಡಿ, ಪರಿಸರ ಮನುಷ್ಯನ ಅಗತ್ಯತೆ ತೀರಿಸುತ್ತಿದೆ. ಆದರೆ ಪರಿಸರಕ್ಕೆ ನಾವೇನು ಮಾಡಿದ್ದೇವೆ ಎಂಬುದನ್ನು ಅರಿಯಬೇಕಿದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನದಿಂದ ಪರಿಸರದಲ್ಲಿ ಅಸಮತೋಲನ ಕಾಣುತ್ತಿದ್ದೇವೆ. ಆದ್ದರಿಂದ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕಟಿಬದ್ಧರಾಗಬೇಕಿದೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.


ಪತ್ರಕರ್ತರ ಸಂಘದ ಉಪಾಧ್ಯಕ್ಷ ಟಿ.ಎ.ಶ್ರೀನಿಧಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಆನಂದಕುಮಾರ್ ಬೇಂದ್ರೆ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪೇಂಟ್ ರವಿ, ಉಪಾಧ್ಯಕ್ಷ ಶಿವರಾಜ್, ಖಜಾಂಚಿ ಗಣೇಶ್, ಕಾರ್ಯದರ್ಶಿ ಲಕ್ಷ್ಮಣ್, ವೆಂಕಟೇಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net