

ಕಲಬುರಗಿ: ರೈತರ ಬೆಳೆಗೆ ಎಂಎಸ್‌ಪಿ ನೀಡಬೇಕು ಎಂದು ಒತ್ತಾಯಿಸಿ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ನ.೨೬ರಂದು ದೇಶಾದ್ಯಂತ ಸಂಯುಕ್ತ ಹೋರಾಟ ಕರ್ನಾಟಕದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಸಂಯುಕ್ತ ಹೋರಾಟ ಸಮಿತಿ ಮುಖಂಡ ಶರಣಬಸಪ್ಪ ಮಮಶೆಟ್ಟಿ ಹೇಳಿದರು. ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಅಣತಿಯಂತೆ ರೈತ ವಿರೋಧಿ ನೀತಿ ಮಾಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಅದೇ ನೀತಿ ಬೆಂಬಲಿಸುತ್ತಿದೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂಬುದು ಹಲವು ವರ್ಷದ ಬೇಡಿಕೆಯಾಗಿದೆ. ಆದರೆ ಈ ಕುರಿತು ಆಡಳಿತ ಮಾಡುವ ಎಲ್ಲ ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ರೈತರು, ಕಾರ್ಮಿಕರ ಸಾಲಮನ್ನಾ ಮಾಡಬೇಕು, ಆತ್ಮಹತ್ಯೆಗಳನ್ನು ತಡೆಯಬೇಕು, ರೈತರ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ಭೂ ಸುಧಾರಣಾ, ಎಂಪಿಎAಸಿ ಕಾಯ್ದೆಗೆ ತಂದಿದ್ದ ತಿದ್ದುಪಡಿ ರದ್ದು ಮಾಡಬೇಕು, ರೈತರಿಗೆ ಟಿಸಿ ಸರಿಯಾಗಿ ಪೂರೈಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನ.೨೬ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಮಿಕ, ರೈತ ಸಂಘಟನೆಗಳ ಮುಖಂಡರಾದ ಭೀಮಶೆಟ್ಟಿ ಯಂಪಳ್ಳಿ, ಭೀಮಾಶಂಕರ ಮಾಡಿಯಾಳ, ಮಹೇಶ ಎಸ್.ಬಿ., ಎಸ್.ಆರ್.ಕೊಲ್ಲೂರೆ, ಪ್ರಭುದೇವ ಯಳಸಂಗಿ, ಎಸ್.ಎಂ.ಶರ್ಮಾ, ಎಂ.ಬಿ.ಸಜ್ಜನ್, ಎಚ್.ಎಸ್.ಪದಕಿ ಸೇರಿ ಇತರರಿದ್ದರು.