

ಕೊಳ್ಳೇಗಾಲ: ತಾಲೂಕಿನ ಕೆಂಪನಪಾಳ್ಯ ಗ್ರಾಮದಲ್ಲಿ ವೀರ ಮಡಿವಾಳ ಮಾಚಿದೇವರ ಜಯಂತಿಯನ್ನು ಶನಿವಾರ ಸರಳವಾಗಿ ಆಚರಿಸಲಾಯಿತು.
ಗ್ರಾಮದ ಬಸವಣ್ಣ ಕಟ್ಟೆ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯ ಮುಖಂಡರು ಮಾಚಿ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ಮುಖಂಡ ಸೋಮಣ್ಣ ಮಾತನಾಡಿ, ಸಮಾಜಕ್ಕೆ ಮಡಿವಾಳ ಮಾಚಿದೇವರ ಕೊಡುಗೆ ಅಪಾರ. ನೇರ ನುಡಿಗಳ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದ್ದಾರೆ. ಸರ್ವರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಡಿವಾಳ ಸಮುದಾಯದವರು ಸಂಘಟನೆಯಾಗುವ ಜತೆಗೆ ಶಿಕ್ಷಣ ಪಡೆದು, ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಅರಿಯಬೇಕು ಎಂದು ಸಲಹೆ ನೀಡಿದರು.
ಶರಣ ಸಮೂಹವನ್ನು ರಕ್ಷಿಸಿ, ವಚನ ಸಾಹಿತ್ಯವನ್ನು ಸಂರಕ್ಷಿಸಿದ ವೀರ ಗಣಾಚಾರಿ, ಸರ್ವ ಶ್ರೇಷ್ಠ ಶಿವಶರಣ ಶ್ರೀ ಮಡಿವಾಳ ಮಾಚಿದೇವ ಅವರ ಸರ್ವರಿಗೂ ಸಮ ಪಾಲು - ಸಮಬಾಳು ಎಂಬ ಸಾಮಾಜಿಕ ಕ್ರಾಂತಿಯ ಕಿಡಿ ಹೊತ್ತಿಸಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸಾರಿದ ಸಮಾನತೆಯ ಸತ್ಯ ಸಂದೇಶವು ಸಾರ್ವಕಾಲಿಕ ಎಂದರು.
ಈ ಸಂದರ್ಭದಲ್ಲಿ ಮುಖಂಡ ರಾಚಪ್ಪ, ರೇಚಣ್ಣ ಸ್ವಾಮಿ, ನಿಂಗರಾಜು, ವೀರ ಮಡಿವಾಳ ಯುವಕರ ಸಂಘದ ಅಧ್ಯಕ್ಷ ರವಿಚಂದ್ರ ಸ್ವಾಮಿ ಸೇರಿದಂತೆ ಗ್ರಾಮದ ಯಜಮಾನರು ಮುಖಂಡರಿದ್ದರು.