ಸರಳ ವ್ಯಕ್ತಿತ್ವದ ವೆಂಕಟೇಶ ಮಾನು

1207Klb03
Published on

ಕಲಬುರಗಿ: ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತ ವೆಂಕಟೇಶ ಮಾನು ಅವರ ನಿಧನ ಹಿನ್ನೆಲೆಯಲ್ಲಿ ನಗರದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತರು, ಒಡನಾಡಿಗಳು, ಅತ್ಯಂತ ಜವಾಬ್ದಾರಿಯುತ ಪತ್ರಕರ್ತರಾಗಿದ್ದ ವೆಂಕಟೇಶ ಮಾನು ಸರಳ ವ್ಯಕ್ತಿತ್ವ ರೂಪಿಸಿಕೊಂಡು ಜನಪರ ಪತ್ರಕರ್ತ. ಮೃದು ಭಾಷಿಯಾಗಿದ್ದು, ಜನಪರ ಪತ್ರಿಕೋದ್ಯಮದಲ್ಲಿ ತಮ್ಮದೇ ಕೊಡುಗೆ ನೀಡಿದ್ದರು. ಕಲಬುರಗಿಯನ್ನು ಕಾರ್ಯಕ್ಷೇತ್ರ ಮಾಡಿಕೊಂಡು ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು ಎಂದು ಸ್ಮರಿಸಿದರು.

ಹಿರಿಯ ಪತ್ರಕರ್ತ ಟಿ.ಶಿವಾನಂದನ ಮಾತನಾಡಿ, ವೆಂಕಟೇಶ ಮಾನು ಸುಮಾರು ಮೂರು ದಶಕ ಪತ್ರಿಕೋದ್ಯಮದಲ್ಲಿದ್ದರೂ ಅಂತಿಮ ದಿನಗಳಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದರು. ಆರ್ಥಿಕ ಸಂಕಷ್ಟ ಎದುರಿಸಿದ್ದರು. ಆದ್ದರಿಂದ ಕಾರ್ಫಸ್ ಪಂಡ್ ಸೃಜಿಸಬೇಕು. ನಿಶ್ಚಿತ ಪಿಂಚಣಿ ಸೇರಿ ಇತರ ಸೌಲಭ್ಯ ದೊರೆಯುವಂತೆ ಮಾಡಬೇಕು. ಸರ್ಕಾರದಿಂದ ಸಹಾಯಧನ ಒದಗಿಸಿ, ಕುಟುಂಬಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ಸೇತುಮಾಧವ ಜೋಶಿ, ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಪತ್ರಕರ್ತರಾದ ಶಿವರಂಜನ್ ಸತ್ಯಂಪೇಟ, ಸುಭಾಷ ಬಣಗಾರ, ಸಂಗಮನಾಥ ರೇವತಗಾಂವ, ಭವಾನಿ ಸಿಂಗ್, ಶಿವಲಿಂಗಪ್ಪ ದೊಡ್ಡಮನಿ, ಸಿದ್ದಣ್ಣ ಮಾಲಗಾರ, ಬಿ.ವಿ.ಚಕ್ರವರ್ತಿ, ಶರಣಗೌಡ ಪಾಳಾ, ಮಹೇಶ ಕುಲ್ಕರ್ಣಿ ಇತರರಿದ್ದರು. ದೇವಿಂದ್ರಪ್ಪ ಅವಂಟಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net