ಸರಗೂರು: ಜ.17ರಂದು ಏರ್ಪಡಿಸಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತಿ, ಕವಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅವರನ್ನು ಆಯ್ಕೆ ಮಾಡಲಾಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಂಡಗಣ್ಣಸ್ವಾಮಿ ಅಧ್ಯಕ್ಷತೆಯಲ್ಲಿ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿ ನಿರ್ಣಯ ಕೈಗೊಳ್ಳಲಾಯಿತು.
ಸಮ್ಮೇಳನದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಹಾಗೂ ಜಿಪಂ ಮಾಜಿ ಸದಸ್ಯ ಪಿ.ರವಿ ಮಾತನಾಡಿ, ಸರಗೂರು ನೂತನ ತಾಲೂಕು ಕೇಂದ್ರವಾಗಿ ರೂಪುಗೊಂಡ ನಂತರದ ಪ್ರಥಮ ಸಾಹಿತ್ಯ ಸಮ್ಮೇಳನ ಇದಾಗಿದ್ದು, ಎಲ್ಲ ರೀತಿಯಲ್ಲಿಯೂ ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ಸಮ್ಮೇಳನ ಜರುಗಬೇಕು, ಅದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.
ಶಾಸಕರು ಹೆಚ್ಚು ಆಸಕ್ತಿಯಿಂದ ಸಮ್ಮೇಳನದ ಯಶಸ್ಸಿಗೆ ಸಹಕಾರ ನೀಡುತ್ತಿದ್ದಾರೆ. ತಾಲೂಕಿನ ಸಮಸ್ತರು ಈ ಕನ್ನಡದ ಹಬ್ಬದಲ್ಲಿ ಭಾಗಿಯಾಗುವ ಹಾಗೆ ಶ್ರಮಿಸಬೇಕು ಎಂದರು.
ಸಮ್ಮೇಳನ ನೂತನ ಅಧ್ಯಕ್ಷರ ಪರಿಚಯ:
ಡಾ.ವೈ.ಡಿ.ರಾಜಣ್ಣ ಪ್ರಸ್ತುತ ತಾಲೂಕು ಪಶುಪಾಲನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರವೃತ್ತಿಯಲ್ಲಿ ಸೃಜನಶೀಲ ಕವಿಯಾಗಿ, ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ.
ಚಿತ್ತ ಚಿತ್ತಾರ, ಮತ ಅಭಿಮತ ಇವರ ಜನಪ್ರಿಯ ಕವನ ಸಂಕಲನಗಳು. ಬಣ್ಣದ ಲೋಕ, ಅಮೃತ ಕಾವಲು ಕೃತಿ ಸೇರಿದಂತೆ ಹಲವು ಕೃತಿಗಳ ಲೇಖಕರಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡದ ಕಾರ್ಯಕ್ರಮಗಳ ಸಂಘಟನಾ ಚತುರತೆ ಇವರದ್ದಾಗಿದೆ. ಪಿರಿಯಾಪಟ್ಟಣ ತಾಲೂಕು ಕಸಾಪ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಮೈಸೂರು ಜಿಲ್ಲೆಯ ಕಸಾಪ ಕಾರ್ಯದರ್ಶಿ, 2016-ರಿಂದ 2021 ರವರೆಗೆ ಜಿಲ್ಲೆಯ ಕಸಾಪ ಅಧ್ಯಕ್ಷರಾಗಿ ಹತ್ತಾರು ತಾಲೂಕು ಸಾಹಿತ್ಯ ಸಮ್ಮೇಳನಗಳು, ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ 2017ರಲ್ಲಿ ಮೈಸೂರಿನಲ್ಲಿ ಐತಿಹಾಸಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿ ಯಶಸ್ವಿಗೊಳಿಸಿ ರಾಜ್ಯದ ಸಾಹಿತ್ಯ ಕ್ಷೇತ್ರದ ಶ್ಲಾಘನೆಗೆ ಪಾತ್ರರಾಗಿರುವ ಹೆಮ್ಮೆ- ಹೆಗ್ಗಳಿಕೆ ಡಾ.ವೈ.ಡಿ.ರಾಜಣ್ಣ ಅವರದು.
ಜಿಲ್ಲಾ ಕಸಾಪ ಅಧ್ಯಕ್ಷ ತೆಯ ಅವಧಿಯಲ್ಲಿ 715ಕ್ಕೂ ಹೆಚ್ಚು ಕನ್ನಡ ಕಾರ್ಯಕ್ರಮ ಆಯೋಜಿಸಿರುವ ದಾಖಲೆಯ ನೆಲೆ-ಹಿನ್ನೆಲೆ ಇವರದಾಗಿದೆ.
ಹತ್ತಾರು ಕವಿಗೋಷ್ಠಿ, ವಿಚಾರ ಗೋಷ್ಠಿ, ನೂರಾರು ಪುಸ್ತಕ ಬಿಡುಗಡೆ, ಗಮಕ, ಸಿನಿಮಾ, ರಂಗಭೂಮಿ, ವಿಜ್ಞಾನ ತಂತ್ರಜ್ಞಾನ, ಕನ್ನಡದ ಇತ್ತೀಚಿನ ಬೆಳವಣಿಗೆವರೆಗೂ ಕಾರ್ಯಕ್ರಮ ಸಂಘಟಿಸಿದ ಶ್ರಮ ಕಾಳಜಿ ಇವರದು.
ಜಿಲ್ಲೆಯ ಹಿರಿಯ ಸಾಹಿತಿಗಳು, ವಿದ್ವಾಂಸರು ಹಾಗೂ ಕನ್ನಡ ಹೋರಾಟಗಾರರು ಇವರಿಗೆ ‘ವಿರಾಜಮಾನ’ ಎಂಬ ಅಭಿನಂದನಾ ಗ್ರಂಥವನ್ನು ನಾಡಿನ ಹಿರಿಯ ಸಾಹಿತಿ ಸಿಪಿಕೆ ಅವರ ಗೌರವ ಸಂಪಾದಕತ್ವದಲ್ಲಿ ಸಮರ್ಪಿಸಿದ್ದಾರೆ. ಆ ಮೂಲಕ ಮೈಸೂರು ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ರಾಗಿದ್ದಾರೆ.
ಪಪಂ ಸದಸ್ಯ ಶ್ರೀನಿವಾಸ, ಕಾಂಗ್ರೆಸ್ ಟೌನ್ ಅಧ್ಯಕ್ಷ ಹಾಗೂ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಎಸ್. ಎನ್.ನಾಗರಾಜು, ಎಪಿಎಂಸಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಗ್ರಾಪಂ ಅಧ್ಯಕ್ಷ ಸುಧೀರ್‌ಗೌಡ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ತಾಪಂ ಮಾಜಿ ಅಧ್ಯಕ್ಷ ಸಿ.ಕೆ.ಗಿರೀಶ್, ಕಸಾಪ ಪ್ರಧಾನ ಕಾರ್ಯದರ್ಶಿ ನಿಂಗರಾಜು, ಅದಿಕರ್ನಾಟಕ ಮಹಾಸಭಾ ಪ್ರಧಾನ ಕಾರ್ಯದರ್ಶಿ ಚನ್ನೀಪುರ ಮಲ್ಲೇಶ್, ಶಿಕ್ಷಕ ಬಂಗಾರಯ್ಯ, ಪಪಂ ಮಾಜಿ ಅಧ್ಯಕ್ಷ ಚೆಲುವರಾಜು, ಸಕಲೇಶ್ ಮತ್ತಿತರರು ಹಾಜರಿದ್ದರು.