

ಬೇಲೂರು: ಗ್ರಾಮೀಣ ಭಾಗದ ಜನರಿಗೆ ಯಾವುದೇ ತೊಂದರೆಯಾಗದಂತೆ ಮೂಲಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ನನ್ನ ಮೇಲಿದ್ದು, ಮಲೆನಾಡಿನ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವುದಾಗಿ ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಕಳ್ಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆಂಡೆಹಳ್ಳಿ ಗ್ರಾಮದಲ್ಲಿ 1 ಕೋಟಿ ರೂ. ಅನುದಾನದಲ್ಲಿ ಸಮುದಾಯ ಭವನದ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ಮಳೆಗಾಲದಲ್ಲಿ ಯಾವುದೇ ಶುಭ ಸಮಾರಂಭಗಳನ್ನು ಮಾಡಲು ಸಾಧ್ಯವಾಗದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಿಸುವಂತೆ ಸಾರ್ವಜನಿಕರು ಮನವಿ ಮಾಡಿದ ಕಾರಣ ಲೋಕೋಪಯೋಗಿ ಇಲಾಖೆಯಿಂದ 1 ಕೋಟಿ ರೂ.ಅನುದಾನ ಮಂಜೂರು ಮಾಡಿಸಿ ಮೂರು ಅಂತಸ್ತಿನ ಕಟ್ಟಡ ಕಟ್ಟುವ ಉದ್ದೇಶ ಹೊಂದಿದ್ದಾರೆ ಎಂದರು.
ಇಲ್ಲಿನ ಸಮಿತಿಯವರು ಸಮುದಾಯ ಭವನ ನಿರ್ಮಾಣಕ್ಕೆ ಬೇಕಿರುವ ಹೆಚ್ಚುವರಿ ಹಣವನ್ನು ಸಾರ್ವಜನಿಕರಿಂದ, ಸ್ಥಳೀಯ ದಾನಿಗಳಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸುವ ಕೆಲಸ ಮಾಡಿಸಲಿದ್ದಾರೆ. ಜತೆಗೆ ಮಲೆನಾಡು ಭಾಗದ ಗ್ರಾಮೀಣ ಭಾಗದಲ್ಲಿ ಮೂಲಸೌಲಭ್ಯಗಳನ್ನೆ ಕಾಣದ ಅನೇಕ ಗ್ರಾಮಗಳಿದ್ದು, ಆ ಗ್ರಾಮಗಳ ಕೆರೆ, ಕಟ್ಟೆಗಳ ಅಭಿವೃದ್ಧಿ, ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್‌ನಂತಹ ಸಮಸ್ಥೆಗಳನ್ನು ಬಗೆಹರಿಸುವ ಜತೆಗೆ ಸಮುದಾಯ ಭವನಗಳ ನಿರ್ಮಾಣ ಅತ್ಯವಶ್ಯಕವಾಗಿದೆ. ಅಲ್ಲದೆ, ಮಲೆನಾಡು ಭಾಗದ ಅಭಿವೃದ್ಧಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಅನೇಕ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅನುದಾನ ಬಂದ ನಂತರ ಗುಣಮಟ್ಟದ ಕಾಮಗಾರಿಗಳನ್ನು ಮಾಡಿಸಲಾಗುವುದು. ಕಳಪೆ ಕಾಮಗಾರಿ ಮಾಡಿದರೆ ಗುತ್ತಿಗೆದಾರರೇ ಜವಾಬ್ದಾರರು ಎಂದರು.
ಕಳ್ಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಹಕೀಂ ಮಾತನಾಡಿ, ನನ್ನ ಅವಧಿಯಲ್ಲಿಯೇ ಸಮುದಾಯ ಭವನ ನಿರ್ಮಾಣವಾಗಬೇಕು ಎಂಬ ಮಹದಾಸೆ ಇತ್ತು. ಆದರೆ, ಭವನಕ್ಕೆ ಭೂಮಿಪೂಜೆ ನೆರವೇರಿರುವುದು ಸಂತಸ ತಂದಿದೆ. ಈ ಭವನ ನಮ್ಮ ಗ್ರಾಮಕ್ಕೆ ಬರಲು ಶಾಸಕ ಎಚ್.ಕೆ..ಸುರೇಶ್ ಕಾರಣರಾಗಿರುತ್ತಾರೆ. ಅವರು ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತಿದ್ದಾರೆ ಎಂದರು.
ತಾಪಂ ಇಒ ವಸಂತಕುಮಾರ್, ಉಪಾಧ್ಯಕ್ಷೆ ರಾಧಾ, ಸದಸ್ಯರಾದ ನಿಂಗೇಗೌಡ, ರೇವಣ್ಣ, ಶ್ರೀನಿವಾಸ್, ಮುಖಂಡರಾದ ಜಿ.ಕೆ.ಕುಮಾರ್, ಪ್ರಕಾಶ್, ನವೀನ್, ಜಗದೀಶ, ದರ್ಶನ್ ಇತರರಿದ್ದರು.