ಸಮೀಕ್ಷೆಗೆ ಎಲ್ಲರ ಸಹಕಾರ ಅಗತ್ಯ

bkt-19-5
Published on

ಬಾಗಲಕೋಟೆ : ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು ಹಮ್ಮಿಕೊಂಡ ಒಂದು ದಿನದ ಅರಿವು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಮಾಜಿಕ ಜವಾಬ್ದಾರಿ ನಮ್ಮೇಲ್ಲರ ಮೇಲೆ ಇದ್ದು, ಸಮೀಕ್ಷೆಯಲ್ಲಿ ನೈಜವಾದ ಮಾಹಿಯನ್ನು ಕಲೆ ಹಾಕಬೇಕಿದೆ. ಈ ಕಾರ್ಯದಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಯ ಒಳಮೀಸಲಾತಿಯ ವಗೀಕರಣಕ್ಕೆ ನೈಜವಾದ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಮೀಕ್ಷೆ ಹಮ್ಮಿಕೊಂಡಿದೆ. ಸರಕಾರದ ಇಂತಹದೊಂದು ಉದ್ದೇಶ ಸಾರ್ಥಕತೆ ಆಗಬೇಕಾದರೆ ತಮ್ಮ ತಮ್ಮ ಕಾರ್ಯದಲ್ಲಿ ಜವಾಬ್ದಾರಿ ಅರಿವು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಸಮೀಕ್ಷೆಯಲ್ಲಿ ಯಾವುದೇ ರೀತಿಯ ತಪ್ಪು ಆಗದಂತೆ ಮುತುವರ್ಜಿ ವಹಿಸಬೇಕಾಗಿರುವದರಿಂದ ಸಮುದಾಯದ ಮುಖಂಡರುಗಳಿಗೆ ಈ ಕುರಿತು ಅರಿವು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಸಮೀಕ್ಷೆ ಕೈಗೊಳ್ಳಲು ಜಿಲ್ಲೆಯ ಇಬ್ಬರು ಮಾಸ್ಟರ ಟ್ರೈನರ್‍ಗಳನ್ನು ಬೆಂಗಳೂರಿಗೆ ಕಳುಹಿಸಿ ತರಬೇತಿ ಪಡೆದುಕೊಂಡಿದ್ದಾರೆ. ಮಾಸ್ಟರ ಟ್ರೈನರಗಳ ಮೂಲಕ ಆಯಾ ತಾಲೂಕಿನ ಟ್ರೈನರ್‍ಗಳಿಗೆ ತರಬೇತಿ ನೀಡಿ ಆಯಾ ತಾಲೂಕಿ ಗಣತೀದಾರರಿಗೆ ಸಂಪೂರ್ಣ ತರಬೇತಿ ನೀಡಲಾಗಿದೆ. ಸಮೀಕ್ಷೆ ಕಾರ್ಯದಲ್ಲಿಯೇ ಕೆಲವೊಂದು ಕಾಲಂ ಭರ್ತಿ ಮಾಡಲು ಮಾಹಿತಿ ದೊರಯದೇ ಇರುವುದು ಕಂಡುಬಂದಿದೆ. ಸಮೀಕ್ಷೆಯಲ್ಲಿ ಪ್ರತಿಯೊಂದು ಅಂಶಗಳನ್ನು ಗನನೆಗೆ ತೆಗೆದುಕೊಂಡು ಕಾರ್ಯ ನಿರ್ವಹಿಸಲು ಗಣತಿದಾರರಿಗೆ ತಿಳಿಸಲಾಗಿದೆ. ಸಮೀಕ್ಷೆಯ ಬಗ್ಗೆ ದೂರುಗಳು ಇದ್ದಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಹೆಲ್ಪಲೈನ್‍ಗಳಿಗೆ ಇಲ್ಲವೇ ರಾಜ್ಯ ಮಟ್ಟದ ಸಹಾಯವಾಣಿ ಅಥವಾ ಜಿಲ್ಲಾಧಿಕಾರಿಗಳಿಗಾದರೂ ಕರೆ ಮಾಡಬಹುದಾಗಿದೆ ಎಂದರು.

ಕಾರ್ಯಾಗಾರದಲ್ಲಿ ಸಮುದಾಯದ ಮುಂಖಂಡರ ಸಲಹೆಗಳನ್ನು ಆಲಿಸಿದ ಅವರು ಸಮೀಕ್ಷೆ ನೂರಕ್ಕೆ ನೂರರಷ್ಟು ಮಾಹಿತಿ ದೊರೆಯುವಲ್ಲಿ ತಮ್ಮ ಪಾತ್ರ ಮುಖ್ಯವಾಗಿದ್ದು, ಎಲ್ಲರೂ ಸಹಕರಿಸುವಂತೆ ಕೋರಿದರು. ಸಮೀಕ್ಷೆಯ ಅವಧಿಯನ್ನು ಮೇ 25 ವರೆಗೆ ವಿಸ್ತರಿಸಲಾಗಿದೆ. ಅಲ್ಲದೇ ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ ಮೇ 26 ರಿಂದ 28 ವರೆಗೆ ನಡೆಸಲಾಗುತ್ತಿದೆ. ಆನ್‍ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಲು ಮೇ 28 ವರೆಗೆ ಅವಧಿ ನಿಗದಿಪಡಿಸಲಾಗಿದೆ. ಸಮೀಕ್ಷೆಗೆ ನೇಮಕಗೊಂಡ ನೋಡಲ್ ಅಧಿಕಾರಿ, ತಹಶೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳು ಸಮೀಕ್ಷೆ ಕೈಗೊಂಡ ಮನೆ ಮನೆಗಳ ತೆರಳಿ ಪರಿಶೀಲನೆ ಕೂಡಾ ಮಾಡಲಿದ್ದಾರೆ ಎಂದು ತಿಳಿಸಿದರು.

ಅರಿವು ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ, ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಎಚ್.ಜಿ.ಮೀರ್ಜಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಕಾಂಬಳೆ ವೇದಿಕೆ ಮೇಲೆ ಉಪಸ್ಥಿತರಿದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net