

ಹುಣಸೂರು: ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಡಿಡಿಪಿಐ ಜವರೇಗೌಡ ಭೇಟಿ ನೀಡಿ ಪರಿಶೀಲಿಸಿದರು.
ನಗರದ ರಂಗನಾಥ ಬಡಾವಣೆಯಲ್ಲಿ ಸೋಮವಾರ ಶಿಕ್ಷಕರು ನಡೆಸುತ್ತಿದ್ದ ಗಣತಿ ವೇಳೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ಗಣತಿದಾರರಿಗೆ ಸಮೀಕ್ಷೆ ವೇಳೆ ಕುಟುಂಬಗಳು ನೀಡುವ ಮಾಹಿತಿಯನ್ನಷ್ಟೇ ದಾಖಲಿಸಿಕೊಳ್ಳಬೇಕು. ಜನರಿಗೆ ಗೊತ್ತಿಲ್ಲದ ಮಾಹಿತಿಯ ಬಗ್ಗೆ ತಿಳಿಸಿಕೊಡಿ. ಬಲವಂತವಾಗಿ ಯಾವುದೇ ಮಾಹಿತಿ ಪಡೆಯುವಂತಿಲ್ಲ ಅಥವಾ ದಾಖಲಿಸದಂತೆ ಶಿಕ್ಷಕರಿಗೆ ತಾಕೀತು ಮಾಡಿದರು.
ಹುಣಸೂರು ತಾಲೂಕಿನಲ್ಲಿ 32 ಮಂದಿ ಮೇಲ್ವಿಚಾರಕರು ಸೇರಿದಂತೆ 541 ಬ್ಲಾಕ್‌ಗಳಲ್ಲಿ ಸಮೀಕ್ಷೆ ನಡೆಸುತ್ತಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 5184 ಬ್ಲಾಕ್ ಮೂಲಕ 4867 ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ತಾಲೂಕಿನಲ್ಲಿ 60ಕ್ಕೂ ಹೆಚ್ಚು ಮಂದಿ ಶಿಕ್ಷಕರು ಲಾಗಿನ್ ಆಗಿಲ್ಲ, ಕಾರಣ ಕೇಳಿ ಅವರಿಗೆ ನೋಟಿಸ್ ನೀಡಲಾಗಿದೆ. ಈವರೆಗೆ ಲಾಗಿನ್ ಆಗದವರು ತಕ್ಷಣವೇ ಲಾಗಿನ್ ಆಗಿ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸಮಸ್ಯೆ ಇದ್ದಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮನ್ವಯತೆಯಿಂದ ಸರಿಪಡಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ ಮಾತನಾಡಿ, ತಾಲೂಕಿನಾದ್ಯಂತ 2700ಕ್ಕೂ ಹೆಚ್ಚು ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಹಲವು ಸಮೀಕ್ಷೆದಾರ ಶಿಕ್ಷಕರ ಸರ್ವರ್ ಪ್ರಾಬ್ಲಮ್ ನಿವಾರಣೆಯಾಗಿದೆ. ಇನ್ನು 6 ಮಂದಿ ಶಿಕ್ಷಕರು ಹಾಗೂ 30 ಮಂದಿ ಅಂಗನವಾಡಿ ಕಾರ್ಯಕರ್ತೆಯರು ಮೊಬೈಲ್ ಆ್ಯಪ್ ಡೌನ್‌ಲೋಡ್ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಎಲ್ಲವನ್ನೂ ಸರಿಪಡಿಸಿ ಸಮೀಕ್ಷಾ ಕಾರ್ಯ ಸುಗಮಗೊಳಿಸಿಕೊಡಲಾಗುವುದು ಎಂದರು.
ರಂಗನಾಥ ಬಡಾವಣೆ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲಕ್ಷ್ಮೀನರಸಮ್ಮ, ಇಸಿಒ ರುದ್ರಪ್ಪ, ಶಿಕ್ಷಕರಾದ ಬಸವರಾಜು, ಶಿವಣ್ಣ, ಸರಸ್ವತಿ, ಮಂಜು ಇದ್ದರು.