ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಿ

06M.D.R.3
Published on

ಮದ್ದೂರು: ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಆಯೋಗದಂತೆ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕೈಗೊಂಡಿದ್ದು ಸಮುದಾಯದವರು ಅಗತ್ಯ ಮಾಹಿತಿಗಳನ್ನು ದಾಖಲಿಸಿ ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸುವಂತೆ ತಾಪಂ ಇಒ ರಾಮಲಿಂಗಯ್ಯ ಮನವಿ ಮಾಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಉಪ ಜಾತಿಗಳ ಸಮಗ್ರ ಸಮೀಕ್ಷೆ ನಡೆಸುವ ಬಗ್ಗೆ ದಲಿತ ಮುಖಂಡರ ಸಭೆ ವೇಳೆ ಅವರು ಮಾತನಾಡಿದರು.

ತಾಲೂಕಿನಾದ್ಯಂತ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಸಂಬಂಧ ದತಾಂಶ ಸಂಗ್ರಹಣೆಗಾಗಿ ಮನೆ ಮನೆ ಸಮೀಕ್ಷೆ ನಡೆಸಲು ಸರ್ಕಾರವು ಮುಂದಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸುವ ಗಣತಿದಾರರಿಗೆ ಸಮರ್ಪಕ ಮಾಹಿತಿಯನ್ನು ಒದಗಿಸಿ ಶೇ.100ರಷ್ಟು ಪ್ರಗತಿ ಸಾಧಿಸಲು ದಲಿತ ಮುಖಂಡರ ಸಹಕಾರ ಅಗತ್ಯವಾಗಿದೆ ಎಂದರು.

ಸಮೀಕ್ಷೆ ಕಾರ್ಯವು 17ರ ವರೆವಿಗೂ ಜರುಗಲಿದೆ. ಬಳಿಕ 19ರಂದು ಮತಗಟ್ಟೆ ಸಮೀಕ್ಷೆ ವಿಭಾಗ ನಡೆಯಲಿದೆ. ಜತೆಗೆ ಆನ್‌ಲೈನ್‌ನಲ್ಲೂ ಮಾಹಿತಿಯನ್ನು ಒದಗಿಸಬಹುದಾಗಿದ್ದು ಇದರ ಸದ್ಬಳಕೆಗೆ ಪ್ರತಿಯೊಬ್ಬರೂ ಮುಂದಾಗಬೇಕೆಂದರು.

ತಾಲೂಕಿನಾದ್ಯಂತ 254 ಗಣತಿದಾರರನ್ನು ನೇಮಕ ಮಾಡಿದ್ದು 26 ಮಂದಿ ಮೇಲ್ವಿಚಾರಕರನ್ನು ನಿಯೋಜಿಸಿ ಈಗಾಗಲೇ ಅಗತ್ಯ ತರಬೇತಿಗಳನ್ನು ನೀಡಲಾಗಿದೆ. ಸಮೀಕ್ಷೆ ಕಾರ್ಯ ನಡೆಸುವ ವೇಳೆ ಗ್ರಾ.ಪಂ. ವ್ಯಾಪ್ತಿಯ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಸ್ಥಳೀಯ ದಲಿತ ಮುಖಂಡರ ಸಹಕಾರದೊಂದಿಗೆ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.

ತಮ್ಮ ಪ್ರದೇಶದಲ್ಲಿರುವವರು ಕಡ್ಡಾಯವಾಗಿ ಉಪಜಾತಿಗಳನ್ನು ನಮೂದಿಸುವಂತೆ ಮತ್ತು ಯಾವುದೇ ಲೋಪದೋಷಗಳು ಕಂಡುಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಸರ್ಕಾರದ ಆದೇಶದನ್ವಯ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲು ಇಲಾಖೆಯೊಟ್ಟಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರಲ್ಲದೆ, ಕೆಲ ನ್ಯೂನತೆಗಳನ್ನು ಸರಿಪಡಿಸಿ ಮತ್ತು ಅಗತ್ಯ ಮಾಹಿತಿಗಳನ್ನು ಒದಗಿಸಬೇಕೆಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು ಮಾತನಾಡಿ, ಮನೆ ಮನೆ ಸಮೀಕ್ಷೆ ಕಾರ್ಯ ಕೈಗೊಳ್ಳುವ ವೇಳೆ ಪ್ರತಿಯೊಂದು ಕುಟುಂಬದವರು ಅಗತ್ಯ ಮಾಹಿತಿಗಳನ್ನು ಗಣತಿದಾರರಿಗೆ ಸಲ್ಲಿಸುವಂತೆ ಮತ್ತು ಯಾವುದೇ ಲೋಪದೋಷಗಳು ಕಂಡು ಬರದಂತೆ ದಲಿತ ಮುಖಂಡರು ಇಲಾಖೆಯೊಂದಿಗೆ ಕೈಜೋಡಿಸಿ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಬಿಇಒ ಧನಂಜಯ, ಸಿಡಿಪಿಒ ನಾರಾಯಣ್, ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ, ದಲಿತ ಮುಖಂಡರಾದ ಮಹದೇವಯ್ಯ, ಶಿವು, ಕೆ.ಟಿ.ಶಿವಕುಮಾರ್, ಆನಂದ್, ರವಿಕುಮಾರ್, ಮರಳಿಗ ಶಿವರಾಜು, ಭಾನುಪ್ರಕಾಶ್, ಅಂದಾನಿ ಸೋಮನಹಳ್ಳಿ, ವೆಂಕಟಾಚಲಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net