

ರಾಮ ಮನಗೂಳಿ ವೇದಿಕೆ(ಬಾಗಲಕೋಟೆ):
ಪ್ರಸ್ತುತ ಸಮಾಜದಲ್ಲಿ ಸಮಾನತೆ ಇದ್ದರೂ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಕಡಿಮೆ ಇದೆ. ಇಂದಿಗೂ ಮಹಿಳೆಯನ್ನು ಅಗೌರವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ ಕಿಲ್ಲೇದಾರ ಕಳವಳ ವ್ಯಕ್ತಪಡಿಸಿದರು.
ನವನಗರ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಹಮ್ಮಿಕೊಂಡಿರುವ ಬಾಗಲಕೋಟೆ ಜಿಲ್ಲಾ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇಯ ದಿನದ ಕಾರ್ಯಕ್ರಮದಲ್ಲಿ ಮಹಿಳಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಂದಿಗೂ ಬಾಲ್ಯವಿವಾಹ, ಹೆಣ್ಣು ಭ್ರ‍್ರೂಣಹತ್ಯೆ ಪ್ರಕರಣಗಳು ಕಂಡು ಬರುತ್ತಿವೆ. ಹೆಣ್ಣು ಎಂದರೆ ಸೆರಗಿನ ಕೆಂಡವಾಗಿ ಭಾಸವಾಗುತ್ತದೆ. ಹೀಗಾಗಿ ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯ ಬೆಳೆವಣಿಗೆಗೆ ಆಧ್ಯತೆ ನೀಡಬೇಕು. ಮಹಿಳೆಯ ಸಾಮರ್ಥ್ಯ ಅರ್ಹತೆ ಅನುಗುಣವಾಗಿ ಸಮಾಜದಲ್ಲಿ ಸ್ಥಾನಮಾನಗಳು ಸಿಗಬೇಕು ಹೇಳಿದರು.
ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಮಾತನಾಡಿ, ಮಹಿಳೆ ಇಂದಿಗೂ ಪುರುಷನ ಅಡಿಯೊಳಗಡೆ ಕೆಲಸ ನಿರ್ವಹಿಸುವ ವ್ಯವಸ್ಥೆ ಇದೆ. ಅವಳು ಸಮಾಜದಲ್ಲಿ ಸ್ವತಂತ್ರವಾಗಿ ಬದಕಲು ಹಲವು ಅಡೆತಡೆಗಳು ಇಂದಿಗೂ ಜೀವಂತವಾಗಿ ಕಂಡುಬರುತ್ತದೆ ಎಂದರು.
ಡಾ.ವೀಣಾ ಕಲ್ಮಠ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಸಾಧನೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಎಚ್.ಟಿ.ಕೊಡ್ಡನ್ನವರ ಮಹಿಳೆಯರ ಸಬಲೀಕರಣ ಕುರಿತು ಮಾತನಾಡಿದರು. ಉಮಾ ರೇವಡಿಗಾರ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿಗಳು ವೇದಿಕೆಯಲ್ಲಿದ್ದರು. ವಿಜಯಶ್ರೀ ಮುರನಾಳ ಸ್ವಾಗತಿಸಿದರು. ಪ್ರಿಯಾ ಕಟ್ಟಿ ನಿರೂಪಿಸಿದರು. ಸುಶೀಲಾ ಅಣ್ಣಿಗೇರಿ ವಂದಿಸಿದರು.