

ಶ್ರೀರಂಗಪಟ್ಟಣ: ಹನ್ನೆರಡನೇ ಶತಮಾನದಲ್ಲೇ ಮೌಢ್ಯತೆಯ ವಿರುದ್ಧ ಧನಿ ಎತ್ತಿ ಸರ್ವರನ್ನೂ ಸಮಾನತೆಯಿಂದ ಕಂಡು ಅನುಭವ ಮಂಟಪ ಕಟ್ಟಿದ ಶ್ರೇಷ್ಠ ವಿಶ್ವಗುರು ಬಸವಣ್ಣನವರು ಪ್ರತಿಯೊಬ್ಬರಿಗೂ ಆದರ್ಶ ಎಂದು ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್ ಬಣ್ಣಿಸಿದರು.
ಪಟ್ಟಣದ ಶ್ರೀಜಗಜ್ಯೋತಿ ಬಸವೇಶ್ವರಸ್ವಾಮಿ ಸಂಘದ ವತಿಯಿಂದ ಶ್ರೀಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀಬಸವೇಶ್ವರರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಅಸಹಿಷ್ಣುತೆ ಹಾಗೂ ಜಾತಿ-ವರ್ಗಗಳ ಶೋಷಣೆ ವಿರುದ್ಧ ವಚನಗಳ ಮೂಲಕ ಏಕಮಂತ್ರ ಸಾರಿದ ಬಸವಣ್ಣ ಮನುಷ್ಯರಲ್ಲಿ ಕೀಳರಿಮೆಯ ಭಾವನೆಯನ್ನು ತೊರೆದು ಎಲ್ಲರೂ ಒಂದೇ ಎಂಬ ಸಾಮಾಜಿಕ ಸುಜ್ಞಾನದ ಕ್ರಾಂತಿ ಬಿತ್ತಿದ ಮಹಾಯೋಗಿ. ಕಾಯಕದಿಂದ ಕೈಲಾಸ ಕಾಣಬಹುದು ಎಂಬ ನೀತಿಯಿಂದ ಬದುಕಿಗೆ ಅಡಿಪಾಯ ಹಾಕಿಕೊಟ್ಟ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅರಿತು ಸಾಮರಸ್ಯದಿಂದ ಬಾಳಬೇಕಾದ ಅನಿವಾರ್ಯತೆ ನಮಲ್ಲಿ ಸದಾಕಾಲ ಇರಬೇಕು ಎಂದರು.
ಬೇಬಿಬೆಟ್ಟದ ಶ್ರೀರಾಮ ಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀಶಿವಬಸವ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಸತ್ಯ ಹಾಗೂ ಸಾಮಾಜಿಕ ನ್ಯಾಯ ಪ್ರತಿಪಾದನೆ ಮಾಡುವ ಮೂಲಕ ಜಗತ್ತಿಗೆ ಬೆಳಕಾದ ಬಸವಾದಿ ಶಿವಶರಣರು ಹಾಕಿಕೊಟ್ಟ ಮೌಲ್ಯಯುತ ಜೀವನ ಪಥವನ್ನು ಪ್ರತಿಯೊಬ್ಬರೂ ಅನುಸರಿಸಿದರೆ ಸಮಾಜದಲ್ಲಿ ಶಾಂತಿ ಹಾಗೂ ಅಭಿವೃದ್ಧಿ ಸಾಧ್ಯವಾಗುತ್ತದೆ. ಬಸವಣ್ಣನವರು ಭೂಮಿ ತಾಯಿ ಸೇವೆಯಲ್ಲಿ ದೇವರನ್ನು ಕಂಡಿದ್ದು, ಕೃಷಿಕರ ಪರವಾಗಿ ನಿಂತ ಮಹಾನ್ ಚೇತನ. ಬಸವಣ್ಣನವರ ಆದರ್ಶಗಳನ್ನು ಅನುಸರಿಸಿದರೆ ಸೌಹಾರ್ದಯುತ ಬದುಕು ನಡೆಸಲು ಸಾಧ್ಯ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎಂ.ನದೀಶ್ ಹಾಗೂ ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಸಿದ್ದಲಿಂಗಯ್ಯ ಉಪನ್ಯಾಸ ನೀಡಿದರು. ಪುರಸಭೆ ಸದಸ್ಯರಾದ ಎಸ್.ಎನ್.ದಯಾನಂದ್, ಪೂರ್ಣಿಮಾ ಪರಶಿವಮೂರ್ತಿ, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್. ಮಂಜುನಾಥ್ ಬೆಟ್ಟಹಳ್ಳಿ, ಜಗಜ್ಯೋತಿ ಬಸವೇಶ್ವರ ಸಂಘದ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಪ್ರದೀಪ್, ವಕೀಲ ಮರಿಸ್ವಾಮಿ, ಪತ್ರಕರ್ತ ಎಸ್.ಕುಮಾರ್, ನಂದೀಶ್, ನಿಂಗಪ್ಪ ಮಾಸ್ತರ್ ನಂಜುಂಡಸ್ವಾಮಿ, ಮೇಷ್ಟ್ರು ವಿಶ್ವನಾಥ್, ಪರಶಿವಮೂರ್ತಿ, ಸೋಮಶೇಖರ್, ಕೆ.ಶೆಟ್ಟಹಳ್ಳಿ ಸುರೇಶ್ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಬಸವಣ್ಣನವರ ಭಾವಚಿತ್ರವಿದ್ದ ವಿಶೇಷ ರಥೋತ್ಸವಕ್ಕೆ ಬೇಬಿಬೆಟ್ಟದ ಶ್ರೀಶಿವಬಸವ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ಉತ್ಸವ ಸಾಗಿದ್ದು, ಈ ವೇಳೆ ವೀರಭದ್ರ ಕುಣಿತ, ವೀರಗಾಸೆ, ನಂದಿಕಂಬ, ಗಾರುಡಿ ಗೊಂಬೆ, ಪೂಜಾ ಕುಣಿತದ ಜಾನಪದ ತಂಡಗಳು ನೂರಾರು ಮಂದಿ ಬಸವ ಭಕ್ತರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.