ಸಮಾಜಮುಖಿ ಪತ್ರಕರ್ತರು ಸೈನಿಕರಿಗೆ ಸಮ

19spt2
Published on

ಸೋಮವಾರಪೇಟೆ: ಸಮಾಜಮುಖಿಯಾಗಿ ಕೆಲಸ ಮಾಡುವ ಪತ್ರಕರ್ತರು ಸೈನಿಕರಿಗೆ ಸಮ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ.ಡಿಸಿಲ್ವಾ ಅಭಿಪ್ರಾಯಪಟ್ಟರು.

ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೇರಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರದ ನಂತರ ಪ್ರಜಾಪ್ರಭತ್ವ ಯಶಸ್ವಿಯಾಗಲು ಪತ್ರಿಕಾರಂಗ ಕಾರಣವಾಗಿದೆ. ಇವತ್ತಿಗೂ ಪತ್ರಕರ್ತರ ಸಮಾಜದ ಉಳಿತಿಗಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಗ್ರಾಮೀಣ ಪತ್ರಕರ್ತರ ಸೇವೆಯೂ ಇದೆ. ಶಾಲೆಗಳ ಸಮಸ್ಯೆಗಳ ಬಗ್ಗೆ ಆಗಾಗ್ಗೆ ಲೇಖನಗಳ ಮೂಲಕ ಸರ್ಕಾರ ಕಣ್ತೆರೆಸುವ ಕೆಲಸ ಮಾಡುತ್ತಾರೆ. ಇದರಿಂದ ಸರ್ಕಾರದ ಸೌಲಭ್ಯಗಳು ಸಿಗುತ್ತವೆ ಎಂದು ಹೇಳಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ವಿದ್ಯೆ ಅಪೂರ್ವವಾದ ಸಂಪತ್ತು. ವಿದ್ಯೆ ಸಮಾಜದಲ್ಲಿ ತಲೆಎತ್ತಿ ನಡೆಯುವಂತೆ ಮಾಡುತ್ತದೆ ಎಂದು ಹೇಳಿದರು.

ಕನಸು, ಗುರಿಯಿಲ್ಲದೆ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಅಸಾಧ್ಯವಾದುದು. ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ಸಮಯಪಾಲನೆಯೊಂದಿಗೆ ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಶಾಲೆಯಲ್ಲಿ ಓದಿದವರು ಯಾವುದರಲ್ಲೂ ಹಿಂದೆ ಉಳಿದಿಲ್ಲ. ಸಾಧಕರ ಪಟ್ಟಿಯಲ್ಲಿ ಸರ್ಕಾರಿ ಶಾಲೆಯ ಕಲಿತರವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಕೇಳಿ ಮನನ ಮಾಡಿಕೊಳ್ಳಬೇಕು. ಅರ್ಥವಾಗದ ವಿಷಯಗಳನ್ನು ಕೇಳಿ ತಿಳಿದುಕೊಂಡರೆ, ಪರೀಕ್ಷೆಯಲ್ಲಿ ಅತೀಹೆಚ್ಚಿನ ಅಂಕ ಪಡೆದುಕೊಳ್ಳಬಹುದು ಎಂದು ಹೇಳಿದರು.

ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಮಾನ್ಯ ಜ್ಞಾನದ ಅಗತ್ಯತೆ ಹೆಚ್ಚಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರ ಸೇವೆ ಅಮೂಲ್ಯವಾದದು ಎಂದು ಹೇಳಿದರು.

ಜಿಲ್ಲಾ ಪ್ರಶಸ್ತಿ ವಿಜೇತರಾದ ಹಿರಿಕರ ರವಿ, ದಿನೇಶ್ ಮಾಲಂಬಿ ಹಾಗೂ ಪತ್ರಿಕಾ ವಿತರಕ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಅಯೋಜಿಸಿದ್ದ ಪ್ರಜಾಪ್ರುಭುತ್ವದಲ್ಲಿ ಪತ್ರಿಕೆಗಳ ಪಾತ್ರ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಿರೀಕ್ಷಾ, ದ್ವಿತೀಯ ಸ್ಥಾನ ಪಡೆದ ಆಶ್ವಿನಿ, ತೃತೀಯ ಸ್ಥಾನ ಪಡೆದ ರಂಜಿತಾ ಅವರಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯ್ ಹಾನಗಲ್, ಶಾಲಾ ಮುಖ್ಯಶಿಕ್ಷಕಿ ರಾಜೇಶ್ವರಿ, ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net