ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ

HUN-JUNE-30-1(VEERASHAIVA MAHASABHA)
Published on

ಹುಣಸೂರು: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಮೂಲಕ ಸಮಾಜಮುಖಿ ಕಾರ್ಯವನ್ನು ಇನ್ನಷ್ಟು ಕೈಗೊಳ್ಳೋಣ ಎಂದು ಮಹಾಸಭಾದ ತಾಲೂಕು ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಹೇಳಿದರು.

ನಗರದ ಗುರುಬೂದಿ ಮಂಗಳ ಮಂಟಪದಲ್ಲಿ ಸೋಮವಾರ ಮಹಾಸಭಾ ಮತ್ತು ಬಸವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಮಾಜದ ಗಣ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ವೀರಶೈವ-ಲಿಂಗಾಯತ ಸಮುದಾಯವು ಸಮಾಜದ ಎಲ್ಲರನ್ನು ತನ್ನ ತೆಕ್ಕೆಗೆ ಪಡೆದು ಒಂದಾಗಿ ಕರೆದುಕೊಂಡು ಹೋಗುವ ಮನೋಭಾವ ಹೊಂದಿದೆ. ಮಹಾಸಭಾ ನಮ್ಮ ಸಮಾಜಮುಖಿ ಕಾರ್ಯಗಳನ್ನು ಮುನ್ನಡೆಸಲು ಇರುವ ಉತ್ತಮ ವೇದಿಕೆಯಾಗಿದೆ. ಇದರೊಂದಿಗೆ ತಾಲೂಕಿನಲ್ಲಿ ಮಾದಳ್ಳಿ ಉಕ್ಕಿನಕಂತೆ ಮಠ ಮತ್ತು ಗಾವಡಗೆರೆಯ ಶ್ರೀ ಗುರುಲಿಂಗ ಜಂಗಮದೇವರ ಮಠಗಳು ನಮ್ಮ ಎರಡು ಕಣ್ಣುಗಳಾಗಿವೆ. ಹರ ಗುರು ಶರಣದ ಆಶೀರ್ವಾದದೊಂದಿಗೆ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸೋಣ. ಬಸವ ಜಯಂತಿ ಅದ್ದೂರಿ ಆಚರಣೆಗೆ ಸಮಾಜದ ಬಹುತೇಕರು ತಮ್ಮ ಸಹಕಾರ ನೀಡುವ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ್ದಾರೆ. ತಾಲೂಕಿನಲ್ಲಿ ಬಸವಭವನ ನಿರ್ಮಾಣಕ್ಕೆ ಜನಪ್ರತಿನಿಧಿಗಳ ಬೆಂಬಲ ಸಿಕ್ಕಿದ್ದು ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ಕೋರಿದರು.

ಸಾನ್ನಿಧ್ಯವಹಿಸಿದ್ದ ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬ ಸದಾಶಿವಸ್ವಾಮಿ ಮಾತನಾಡಿ, ಇಂದಿನ ವಿಕ್ಷಿಪ್ತ ಪರಿಸ್ಥಿತಿಯಲ್ಲಿ ಎಲ್ಲ ಧರ್ಮಗಳೂ ದಯೆ, ಕರುಣೆ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯವ ಕಾರ್ಯ ಮಾಡಬೇಕಿದೆ. 12ನೇ ಶತಮಾನದ ಶಿವಶರಣರು ತಮ್ಮ ಜೀವನ ಮತ್ತು ಸಾಹಿತ್ಯಗಳ ಮೂಲಕ ಇದನ್ನೇ ಬೋಧಿಸಿದ್ದಾರೆ. ಇಂದು ನಾವುಗಳು ಆಚರಿಸುವ ಮಹನೀಯರ ಜಯಂತಿಗಳು ಸಮಾಜದಲ್ಲಿ ಶಾಂತಿ, ನೆಮ್ಮದಿಯನ್ನು ತಂದು ಮಾನವೀಯತೆಯ ಮೂಲಕ ಬದುಕಲು ಪ್ರೇರೇಪಿಸುವ ಉದ್ದೇಶ ಹೊಂದಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಹಾಸಭಾದ ಮುಖಂಡ ಡಾ.ವೃಷಭೇಂದ್ರಸ್ವಾಮಿ ಮಾತನಾಡಿ, ಮಹಾಸಭಾ ನೆರಳಿನಲ್ಲಿ ನಾವೆಲ್ಲರೂ ಇನ್ನಷ್ಟು ಸಂಘಟಿತರಾಗಬೇಕು. ನಮ್ಮಲ್ಲೂ ಏನೂ ಇಲ್ಲದವರು ಇದ್ದು, ಅವರ ನೆರವಿಗೆ ಉಳ್ಳವರಾದ ನಾವೆಲ್ಲರೂ ಮುಂದಾಗೋಣ ಎಂದರು.

ಉಪಾಧ್ಯಕ್ಷ ಭಾಗ್ಯ ಕುಮಾರ್, ಬಸವ ಸಮಿತಿ ಅಧ್ಯಕ್ಷ ವೀರಭದ್ರಪ್ಪ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ವಜ್ರಮ್ಮ, ಮಾಜಿ ಅಧ್ಯಕ್ಷ ಜಾಬಗೆರೆ ರಮೇಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ, ಅಕ್ಕನ ಬಳಗದ ಅಧ್ಯಕ್ಷೆ ಶಾಂತಮ್ಮ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರವೆ ಮಹದೇವ್, ಜಿಪಂ ಮಾಜಿ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಮುಖಂಡರಾದ ಉಯಿಗೌಡನಹಳ್ಳಿ ಚಂದ್ರಶೇಖರ್, ಹರವೆ ಶ್ರೀಧರ್, ನಾಗರಾಜಪ್ಪ, ಸಮಾಜದ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net