ಸಮಾಜದ ಮುಖ್ಯವಾಹಿನಿಗೆ ಬನ್ನಿ

bkt-28-3
Published on

ಬಾಗಲಕೋಟೆ: ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸರ್ಕಾರ ನರೇಗಾ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅವಕಾಶ ನೀಡಿದೆ. ಅದರ ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ, ಮಹಾತ್ಮಗಾಂಧಿ ನರೇಗಾ ಯೋಜನೆ ಹಾಗೂ ಎನ್‌ಆರ್‌ಎಲ್‌ಎಂ-ಸಂಜೀವಿನಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಶ್ರಮ ಚೇತನ-೨೦೨೨ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನರೇಗಾ ಯೋಜನೆ ಅಡಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಜ್ವಾಬ್ ಕಾರ್ಡ ನೀಡಲಾಗುತ್ತಿದೆ. ತನ್ಮೂಲಕ ವರ್ಷದಲ್ಲಿ ೧೦೦ ದಿನ ಉದ್ಯೋಗ ನೀಡುವುದು ಖಾತ್ರಿ ಇದೆ. ಸ್ವ ಸಹಾಯ ಸಂಘಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಅದರ ಮೂಲಕ ಸ್ವ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಸಮಾಜದಲ್ಲಿ ಸಮಾನತೆ ತರುವ ಉದ್ದೇಶದಿಂದ ಸರ್ಕಾರ ಹಲವು ರೀತಿಯಿಂದ ಪ್ರಯತ್ನ ಮಾಡುತ್ತಿದ್ದು, ಲಿಂಗತ್ವ ಅಲ್ಪ ಸಂಖ್ಯಾತರು ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.


ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾತನಾಡಿ, ಸಾಮಾಜಿಕ ಪಿಡುಗುಗಳು ನಮ್ಮನ್ನು ಇಂದಿಗೂ ಕಾಡುತ್ತೀವೆ. ಲಿಂಗತ್ವ ಅಲ್ಪಸಂಖ್ಯಾತರನ್ನು ಸ್ವಂತ ಕುಟುಂಬ, ಊರು, ಸಂಬಂಧಿಕರು ವಿರೋಧಿಸುತ್ತಾರೆ. ಗ್ರಾಮದಲ್ಲಿ ಸರ್ಕಾರದಿಂದ ಮನೆ ಮಂಜೂರು ಮಾಡಲು ಅಡ್ಡಿ ಪಡಿಸುವ ಸನ್ನಿವೇಶ ನೋಡಿದ್ದೇವೆ. ಇದು ಆಗಬಾರದು. ಅವರಿಗೂ ಬದುಕುವ ಹಕ್ಕು ಇದೆ. ಎಲ್ಲ ರೀತಿಯ ಅವಕಾಶ ನೀಡಬೇಕು. ನಗರ, ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಲಿಂಗತ್ವ ಅಲಸಂಖ್ಯಾತರಿಗೆ ಮನೆ, ಪಿಂಚಣಿ ನೀಡಲಾಗುತ್ತಿದೆ. ಏನಾದರು ಸಮಸ್ಯೆ ಉಂಟಾದಲ್ಲಿ ತಕ್ಷಣಕ್ಕೆ ಅಽಕಾರಿಗಳ ಗಮನಕ್ಕೆ ತರಬೇಕು. ಪರಿಹರಿಸಿ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಲಾಗುವುದು ಎಂದ ಅವರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಮತದಾನ ಹಕ್ಕು ಇದೆ. ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.


ಜಿಲ್ಲಾ ಪಂಚಾಯಿತಿ ಆಡಳಿತಾಽಕಾರಿ ಶಿವಯೋಗಿ ಕಳಸದ ಮಾತನಾಡಿ, ಬಾಗಲಕೋಟೆ ಶರಣರ ಕರ್ಮಭೂಮಿ. ಸಮಾಜದಲ್ಲಿ ಸಮಾನತೆಗಾಗಿ ಹೋರಾಟ ಮಾಡಿದ ಪುಣ್ಯರು ಇಲ್ಲಿ ಆಗಿ ಹೋಗಿದ್ದಾರೆ. ಶರಣರು ಹೆಣ್ಣು, ಗಂಡು ಬೇಧವಿಲ್ಲ. ಆತ್ಮ ಒಂದೇ ಅಂತ ಹೇಳಿದ್ದಾರೆ. ಅದರಂತೆ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಗೌರವ ಸ್ಥಾನ ಮಾನ ಸಿಗಬೇಕು. ಯಾರು ದೊಡ್ಡವರು, ಸಣ್ಣವರಲ್ಲ.ಸಮಾಜವು ಸಂವೇದನಾ ಶೀಲತೆಯಿಂದ ಅವರೊಂದಿಗೆ ವರ್ತಿಸಬೇಕು. ಸರ್ಕಾರವು ಅನೇಕ ರೀತಿಯಲ್ಲಿ ಯೋಜನೆ ಪ್ರಕಟಿಸಿದ್ದು, ಭಿಕ್ಷಾಟನೆ ಸೇರಿದಂತೆ ಇನ್ನಿತರ ಕೆಲಸ ಬಿಟ್ಟು ಶ್ರಮದಿಂದ ಸ್ವಾವಲಂಬಿಗಳಾಗಬೇಕು ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಆಯುಕ್ತೆ ಶಿಲ್ಪಾ ನಾಗ್, ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಭಿಯಾನ ನಿರ್ದೇಶಕ ಡಾ.ರಾಗಪ್ರಿಯ ಆರ್., ಯುಕೆಪಿ ವ್ಯವಸ್ಥಾಪಕ ನಿರ್ದೇಶ ರಾಹುಲ್ ಪಾಂಡೆ, ಜಿ.ಪಂ ಸಿಇಒ ಟಿ.ಭೂಬಾಲನ್, ಉಪ ಕಾರ್ಯದರ್ಶಿ ಎನ್.ವೈ.ಬಸರಿಗೀಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ಇತರರು ಇದ್ದರು.

ಕೋಟ್..
ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ನೋಡಬೇಕು. ಸರ್ಕಾರ ಉತ್ತಮವಾದ ಯೋಜನೆ ನೀಡುತ್ತಿದೆ. ನರೇಗಾ ಮೂಲಕ ನಮಗೆ ೧೦೦ ದಿನ ಉದ್ಯೋಗ ದೊರೆಯುತ್ತದೆ. ಭಿಕ್ಷಾಟನೆ ಬಿಟ್ಟು ನರೇಗಾ ಅಡಿಯಲ್ಲಿ ಕೆಲಸ ಮಾಡಬೇಕು. ಹಿಂಜರಿಕೆ ಇಟ್ಟುಕೊಳ್ಳಬಾರದು. ನನ್ನ ದೇಹದಲ್ಲಿ ಬದಲಾವಣೆ ಕಂಡು ಬಂದಾಗ ಯಾರು ಸೇರಲಿಲ್ಲ. ನಂತರ ಸಾರ್ವಜನಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸಲು ಶ್ರಮ ವಹಿಸಿದೆ. ನಂತರ ಜನರೇ ನನಗೆ ಬೆಂಬಲಿಸಿ ೬೫೦ ಕ್ಕೂ ಹೆಚ್ಚು ಮತಗಳ ಅಂತರದಿಂದ ಗ್ರಾ.ಪಂ ಸದಸ್ಯರಾಗಿ ಆಯ್ಕೆ ಮಾಡಿದರು. ನಾವು ಕೂಡಾ ಸಮಾಜದ ಮುಖ್ಯವಾಹಿನಿಗೆ ಬರಬೇಕು.

* ಸುಧಾ ಜೋಗತಿ ಗ್ರಾ.ಪಂ ಸದಸ್ಯೆ ಕಲ್ಲಹಳ್ಳಿ ವಿಜಯನಗರ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net