ಸಮಾಜಕ್ಕೆ ಸರಳ ವಿವಾಹ ಮಾದರಿ

1SIRSI1
Published on

ಶಿರಸಿ: ಮುಜರಾಯಿ ದೇವಾಲಯಗಳಿಗೆ ಭಕ್ತರು ಹಾಕಿದ ಕಾಣಿಕೆ ಸದುಪಯೋಗವಾಗುವ ಶ್ರೇಷ್ಠ ಮಾರ್ಗವೇ ಸಪ್ತಪದಿ ಸರಳ ವಿವಾಹ ಮಹೋತ್ಸವ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸಪ್ತಪದಿ ಸರಳ ಸಾಮೂಹಿಕ ವಿವಾಹ ಕುರಿತು ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಸರಳ ವಿವಾಹಗಳು ಸಮಾಜಕ್ಕೆ ಮಾದರಿಯಾಗಿವೆ. ಇಂಥ ವಿವಾಹಗಳ ಕುರಿತು ಜನಜಾಗೃತಿ ಮೂಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ ಎಂದರು.

ತಮ್ಮ ಮನೆಯ ಮಕ್ಕಳಿಗೆ ವಿವಾಹ ಮಾಡುವಾಗ ಎಷ್ಟು ಜಾಗೃತಿ ವಹಿಸುತ್ತಾರೆಯೋ ಅದೇ ರೀತಿ ಸಾಮೂಹಿಕ ವಿವಾಹ ಕಾರ್ಯವನ್ನೂ ನಡೆಸುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ದೇವಾಲಯದ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿ ಸರ್ಕಾರದ ಭಾಗವಾಗಿ ಕೆಲಸ ಮಾಡುವ ಪ್ರತಿಯೊಬ್ಬರೂ ಈ ಯೋಜನೆ ಯಶಸ್ಸಿಗೆ ಶ್ರಮಿಸಬೇಕು. ಸಪ್ತಪದಿ ಯೋಜನೆಯಡಿ ವಿವಾಹವಾಗುವ ಪ್ರತಿ ಜೋಡಿಗೆ ಸರ್ಕಾರದಿಂದ 55 ಸಾವಿರ ರೂ. ನೀಡಲಾಗುವುದು. ಸಾಮೂಹಿಕ ವಿವಾಹವು ಎಲ್ಲರಿಗೂ ಮುಕ್ತವಾಗಿದೆ. ಈಗಾಗಲೇ 1800 ಅರ್ಜಿಗಳು ಬಂದಿವೆ. ರಾಜ್ಯದಲ್ಲಿ ಏ. 26ಕ್ಕೆ ಪ್ರಥಮ ಹಂತದ ಹಾಗೂ ಮೇ 24ಕ್ಕೆ 2ನೇ ಹಂತದ ವಿವಾಹೋತ್ಸವ ಸಂಘಟಿಸಲಾಗಿದೆ. ಪ್ರಥಮ ಹಂತದ ವಿವಾಹಕ್ಕೆ ಅರ್ಜಿ ಪಡೆಯಲು ಮಾ. 27 ಕೊನೇ ದಿನವಾಗಿದೆ ಎಂದರು.

ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ದೇಶದಲ್ಲಿ ಮೊದಲ ಬಾರಿಗೆ ಸಪ್ತಪದಿ ಕಾರ್ಯಕ್ರಮ ಸಂಘಟಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ರಾಜ್ಯದ ಮುಜರಾಯಿ ಇಲಾಖೆ ಮಾಡಿದ್ದು ಶ್ಲಾಘನೀಯ. ಬಡ ಹಾಗೂ ಶ್ರಮಿಕ ಕುಟುಂಬಗಳಿಗೆ ಈ ಯೋಜನೆ ವರದಾನವಾಗಿದೆ ಎಂದರು.

ಕುಮಟಾ ಶಾಸಕ ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ, ರಾಜ್ಯ ಧಾರ್ವಿುಕ ಪರಿಷತ್ ಅಧ್ಯಕ್ಷ ಸೂರ್ಯನಾರಾಯಣ ಭಟ್ಟ, ಪರಿಷತ್ ಕಾರ್ಯದರ್ಶಿ ರಾಮಚಂದ್ರ ಮಟ್ಟಿ, ನಿವೃತ್ತ ಪ್ರಾಚಾರ್ಯ ಕೆ.ಎನ್. ಹೊಸ್ಮನಿ, ಜಿಪಂ ಸದಸ್ಯೆ ಉಷಾ ಹೆಗಡೆ, ಮಾರಿಕಾಂಬಾ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ, ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಇತರರಿದ್ದರು. ಧಾರ್ವಿುಕ ದತ್ತಿ ಇಲಾಖೆ ಉಪವಿಭಾಗಾಧಿಕಾರಿ ಪುರುಷೋತ್ತಮ ಎಸ್. ಸ್ವಾಗತಿಸಿದರು.

ಹಿಂದು ಧಾರ್ವಿುಕ ಸಂಸ್ಥೆಗಳು, ಧರ್ವದಾಯ ದತ್ತಿಗಳ ಇಲಾಖೆ, ಉತ್ತರ ಕನ್ನಡ ಜಿಲ್ಲಾಡಳಿತ, ಮಾರಿಕಾಂಬಾ ದೇವಾಲಯಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net