

ಬಾಗಲಕೋಟೆ: ಪ್ರಜೆಗಳ ಹಿತಾಸಕ್ತಿ ಕಾಪಾಡುವಲ್ಲಿ ಮತ್ತು ಸಾಮಾಜಿಕ ಕೊಡುಗೆ ನೀಡುವಲ್ಲಿ ವೀರಶೈವ ರಾಜಮನೆತನಗಳ ಕೊಡುಗೆ ಅಪಾರವಾದದ್ದು. ಇದರಲ್ಲಿ ಹಂಡೆ ಅರಸು ಮನೆತನವು ಮೊದಲ ಸಾಲಿನಲ್ಲಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗ, ಬಿವಿವಿಎಸ್ ಸಂಶೋಧನಾ ಕೇಂದ್ರ ಹಾಗೂ ಕಲಬುರ್ಗಿ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಂಡೆ ಅರಸರ ಸಾಂಸ್ಕೃತಿಕ ಕೊಡುಗೆಗಳು ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಗ್ರಂಥಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತರ ಧರ್ಮಿಯರ ರಾಜರಂತೆ ದಬ್ಬಾಳಿಕೆ ಮತ್ತು ಹಿಂಸೆಗಳನ್ನು ಪ್ರೋತ್ಸಾಹಿಸಿದೆ ಧಾರ್ಮಿಕ ನೆಲಗಟ್ಟಿನ ಮೇಲೆ ಆದರ್ಶ ಆಡಳಿತ ನೀಡಿರುವುದು ವೀರಶೈವ ರಾಜಮನೆತನಗಳು. ಇದಕ್ಕೆ ಮೈಸೂರು ಮತ್ತು ಸುರಪೂರ ರಾಜಾಡಳಿತವೆ ಸಾಕ್ಷಿಯಾಗಿದೆ ಎಂದರು.
ಹಂಡೆ ಅರಸರ ಕೊಡುಗೆ ಅಪಾರವಾಗಿದ್ದು ಅವುಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಕರ್ನಾಟಕ ಇತಿಹಾಸದಲ್ಲಿ ತಮ್ಮದೆಯಾದ ಕೊಡುಗೆಕೊಟ್ಟ ಅರಸು ಮನೆತನಗಳ ಮೇಲೆ ಪ್ರಜೆಗಳು ಸರ್ಕಾರಕ್ಕಿಂತ ಹೆಚ್ಚು ಅವಲಂಭಿತರಾಗಿದ್ದರು. ಅದಕ್ಕೆ ಅವರ ತ್ಯಾಗ, ಶೌರ್ಯ, ಧೈರ್ಯ ಮತ್ತು ಸಮರ್ಪಕ ಆಡಳಿತವೆ ಕಾರಣ ಎಂದು ಹೇಳಿದರು.
ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ ಅಧ್ಯಕ್ಷ ಜಿ.ಎನ್.ಪಾಟೀಲ ಮಾತನಾಡಿ, ಹಂಡೆ ಅರಸರ ಆಡಳಿತ ಅತಿದೊಡ್ಡ ಇತಿಹಾಸ ಹೊಂದಿದ್ದು, ಕರ್ನಾಟಕಕ್ಕೆ ತಮ್ಮದೆಯಾದ ಸಾಲು ಸಾಲು ಕೊಡುಗೆ ನೀಡಿದ ಅವರ ಅಧ್ಯಯನ ಅವಶ್ಯವಾಗಿದೆ. ಇತಿಹಾಸವನ್ನು ಕಟ್ಟಲು ಶಾಸನ, ಕೈಪಿಯತ್ತುಗಳು ಮತ್ತು ಸಾಹಿತ್ಯ ಕೃತಿಗಳು ಪ್ರಮುಖವಾಗಿವೆ. ಸಾಂಸ್ಕೃತಿಕ ಅಷ್ಟೆ ಅಲ್ಲದೆ ಧಾರ್ಮಿಕ, ಸಾಹಿತ್ಯ ಲೋಕದಲ್ಲಿಯೂ ಅಪಾರ ಕೊಡುಗೆ ನೀಡಿದ ಹಂಡೆ ಅರಸು ಮನೆತನಗಳ ಬಗ್ಗೆ ಅನ್ಯ ರಾಜ್ಯಗಳಲ್ಲಿ ಅಧ್ಯಯನ ಮಾಡಲಾಗುತ್ತಿದ್ದು, ಹಲವಾರು ಭಾಷೆಗಳಲ್ಲಿ ಗ್ರಂಥಗಳನ್ನು ಬರೆಯಲಾಗಿದೆ. ವೀರಶೈವ ಧರ್ಮವನ್ನು ವೃತದಂತೆ ಕಾಪಾಡಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.
ಪ್ರಾಚಾರ್ಯರ ಡಾ.ವಿ.ಎಸ್.ಕಟಗಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ವಿಶ್ರಾಂತ ಪ್ರಾಧ್ಯಾಪಕ ಡಾ.ರು.ಮ ಷಡಕ್ಷರಯ್ಯ, ಕರ್ನಾಟಕ ಲಲಿತಕಲಾ ವಿವಿ ವಿಶ್ರಾಂತ ವಿಶೇಷಾಧಿಕಾರಿ ಡಾ.ಎಸ್.ಸಿ ಪಾಟೀಲ, ಡಾ.ಡಿ.ಎನ್ ಪಾಟೀಲ, ನೇತಿ ರಘುರಾಮ, ಡಾ. ಕೊಟ್ರಸ್ವಾಮಿ ಎ.ಎಂ.ಎಂ, ಡಾ.ಬಿ.ವ್ಹಿ ಖೋತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.